ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ ಕಾರಣ ಮುಚ್ಚಿಹೋಗಿದ್ದ ಸರ್ಕಾರಿ ಶಾಲೆಯನ್ನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಉಳಿಸಿಕೊಂಡ ಇಬ್ಬರು ಮಕ್ಕಳ ಸಾಹಸದ ಕಥೆಯೇ ಈ ವಾರ ತೆರೆಕಂಡ ಗುರಿ ಚಿತ್ರದ ಕಥಾವಸ್ತು. ಹಳ್ಳಿಗಾಡಿನ ಬಡ ಜನರ ನೆಮ್ಮದಿಯ ಬದುಕಿನ ಮೆಲೆ ಖಾಸಗೀಕರಣ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ, ಮತ್ತು ಸಾರ್ವಜನಿಕರನ್ನು ಲೂಟಿ ಮಾಡುವ ಖಾಸಗಿ ಶಾಲೆಗಳ ಮಾಲೀಕರ ಮಾತಿಗೆ ಮರುಳಾಗಿ ಜನ ಕಾನ್ವೆಂಟ್ ಶಾಲೆಗಳತ್ತ ಮುಖಮಾಡಿ, ಸರ್ಕಾರಿ ಶಾಲೆಯನ್ನು ಹೇಗೆ ಕಡೆಗಣಿಸುತ್ತಿದ್ದಾರೆ ಎಂಬುದನ್ನು ಗುರಿ ಸಿನಿಮಾದಲ್ಲಿ ನಿರ್ದೇಶಕ ಸೆಲ್ವಂ ಅವರು ಪರಿಣಾಮಕಾರಿ ದೃಶ್ಯಗಳೊಂದಿಗೆ ತೋರಿಸಿದ್ದಾರೆ.
ಹಳ್ಳಿಗಾಡಿನ ಪರಿಸರದಲ್ಲಿ ಗ್ರಾಮೀಣ ಜನರ ದಿನನಿತ್ಯದ ಬದುಕನ್ನು ತೋರಿಸುವ ಹಾಡಿನೊಂದಿಗೆ ತೆರೆದುಕೊಳ್ಳುವ ಗುರಿ ಚಿತ್ರದಲ್ಲಿ ಮದ್ಯವ್ಯಸನಿಯಾದ ತಂದೆ, ಹೊಟ್ಟೆ ತುಂಬಿಸಲು ಕಷ್ಟಪಡುವ ತಾಯಿ, ಇವರಿಗಿಬ್ಬರು ಮುದ್ದಾದ ಗಂಡು ಮಕ್ಕಳು. ಚುರುಕು ಸ್ವಭಾವದ ಈ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿರುತ್ತಾರೆ.
ಆ ಶಾಲೆಯಲ್ಲಿರುವುದು ಬೆರಳೆಣಿಕೆಯಷ್ಟು ಮಕ್ಕಳು, ಇಡೀ ಶಾಲೆಗೆ ಒಬ್ಬರೇ ಶಿಕ್ಷಕರು, ಒಂದರಿಂದ ಏಳನೇ ತರಗತಿವರೆಗೂ ಅವರೇ ಪಾಠ ಮಾಡಬೇಕು, ಅವರು ಸಾಕಷ್ಟು ತಿಳಿದುಕೊಂಡಿದ್ದ ಶಿಕ್ಷಕರಾದ್ದರಿಂದ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವೂ ಚೆನ್ನಾಗಿರುತ್ತದೆ. ಬಡವರ ಮಕ್ಕಳಿಗೆ ವರದಾನದಂತಿದ್ದ ಆ ಸರ್ಕಾರಿ ಶಾಲೆಗೆ ಮೆಚ್ಚುಗೆ ಕೂಡ ಸಿಕ್ಕಿರುತ್ತದೆ.
ಆದರೆ ಮುಗ್ಧ ಗ್ರಾಮೀಣ ಜನರನ್ನು ಸುಲಭವಾಗಿ ಮರುಳು ಮಾಡಿದ ಕೆಲ ಉದ್ಯಮಿಗಳು, ಅಲ್ಲಿ ಖಾಸಗಿ ಶಾಲೆಯನ್ನು ತೆರೆಯಲು ಮುಂದಾಗುತ್ತಾರೆ, ಪ್ರತಿ ಮನೆಯಲ್ಲೂ ಕಾನ್ವೆಂಟ್ ಶಾಲೆಯ ಪ್ರಾಮುಖ್ಯತೆ ಬಗ್ಗೆ ಪ್ರಚಾರ ಮಾಡಿಸುತ್ತಾರೆ.
ಆಗ ಸರ್ಕಾರಿ ಶಾಲೆಯ ಮಕ್ಕಳೆಲ್ಲ ಖಾಸಗಿ ಶಾಲೆಗಳತ್ತ ಮುಖ ಮಾಡುವಂತಾಗುತ್ತದೆ. ಒಂದು ಹಂತದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿಗೆ ತಲುಪುತ್ತದೆ. ಆಗ ಶಾಲೆಯ ಮೇಷ್ಟ್ರು ಶಿಕ್ಷಣ ಇಲಾಖೆಗೆ ಮನವಿ ಮಾಡಿ ಶಾಲೆಯನ್ನು ಪುನ: ಪ್ರಾರಂಭಿಸುವ ಬಗ್ಗೆ ಪ್ರಸ್ತಾಪಿಸುತ್ತಾರೆ, ಅಲ್ಲಿ ದರ್ಬಾರ್ ನಡೆಸುವ ಅಧಿಕಾರಿಗಳಿಂದ ಮೇಷ್ಟ್ರು ಕೂಡ ಬೇಸತ್ತು ಸುಮ್ಮನಾಗುತ್ತಾರೆ, ಆಗ ಶಾಲೆ ಮುಚ್ಚಿ ಹೋಗುತ್ತದೆ. ಆಗ ಇಬ್ಬರು ಮಕ್ಕಳು ಆ ಶಾಲೆಯನ್ನು ಉಳಿಸಿಕೊಳ್ಳಲು ಏನೆಲ್ಲ ಪ್ರಯತ್ನ ಮಾಡುತ್ತಾರೆ.? ಕೊನೆಗೂ ಅವರು ಶಾಲೆಯನ್ನು ಉಳಿಸಿಕೊಂಡರೇ ? ಇಲ್ಲವೇ ಎನ್ನುವುದೇ ಗುರಿ ಚಿತ್ರದ ಅಂತಿಮ ಘಟ್ಟ. ಆ ಮಕ್ಕಳ ಸಾಹಸಗಾಥೆಯನ್ನು ತೆರೆಯಮೇಲೆ
ನೋಡಿದರೇ ಚೆನ್ನ. ಈ ಹಂತದಲ್ಲಿ ಮಕ್ಕಳ ಮಾರಾಟಜಾಲ, ಅಲ್ಲದೆ ಸಿಎಂ ಪಾತ್ರವೂ ಬರುತ್ತದೆ.
ಆ ಮಕ್ಕಳ ತಂದೆ ತಾಯಿ ಏನಾದರು? ಸರ್ಕಾರಿ ಶಾಲೆ ಪುನಾರಂಭದ ಕನಸು ನನಸಾಯಿತಾ? ಇದಕ್ಕೆಲ್ಲ ಉತ್ತರ ಬೇಕೆಂದರೆ ಇವತ್ತೇ ಗುರಿ ಸಿನಿಮಾ ನೋಡಬೇಕು.
ಬಾಲನಟರಾದ ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್ ಭೂಷಣ್ ಅವರ ಅದ್ಭುತ ಅಭಿನಯವೇ ಚಿತ್ರದ ಹೈಲೈಟ್. ಉಳಿದಂತೆ ಅಚ್ಯುತ್ ಕುಮಾರ್, ಅವಿನಾಶ್, ಉಗ್ರಂ ಮಂಜು, ಜಯಶ್ರೀ, ನಾಗಾಭರಣ, ಪವನ್, ಜಾಕ್, ಮಲ್ಲು, ಕೆಜಿಎಫ್ ಕೃಷ್ಣಪ್ಪ, ಚಂದ್ರಪ್ರಭ, ಮಿಮಿಕ್ರಿ ಗೋಪಿ, ಸಂದೀಪ್ ಮಲಾನಿ, ರವಿಗೌಡ ಎಲ್ಲರೂ ತಂತಮ್ಮ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ.
ನಿರ್ದೇಶಕರಾಗಿ ಸೆಲ್ವಂ ಮುತ್ತಪ್ಪನ್, ಸಂಗೀತ ಸಂಯೋಜಕರಾಗಿ ಪಳನಿ ಡಿ. ಸೇನಾನಿ ಎಲ್ಲರೂ ತಂತಮ್ಮ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವಿಷ್ಣುದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ರಾಧಿಕಾ, ಚಿತ್ರಲೇಖಾ ಅವರು ನಿರ್ಮಿಸಿದ್ದಾರೆ. ಚಿತ್ರದ ಕ್ಯಾಮೆರಾ ವರ್ಕ, ಸರಳವಾದ ಚಿತ್ರಕಥೆ, ಚುರುಕಾದ ಸಂಭಾಷಣೆಗಳು, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬಂದಿದೆ.