Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ``ಬ್ರ್ಯಾಟ್``(BRAT) ಚಿತ್ರದ ``ಗಂಗಿ ಗಂಗಿ`` ಹಾಡು ಬಿಡುಗಡೆಯಾಯಿತು
Posted date: 16 Tue, Sep 2025 10:30:09 AM
ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನದ, ಜನಪ್ರಿಯ ನಟ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಹಾಗೂ ಮಂಜುನಾಥ್ ಕಂದಕೂರ್ ನಿರ್ಮಾಣದ "ಬ್ರ್ಯಾಟ್"  ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದೆ. ಪ್ರಸ್ತುತ ಈ ಚಿತ್ರದ ಮತ್ತೊಂದು ಮನಮೋಹಕ ಹಾಡು "ಗಂಗಿ ಗಂಗಿ" ಇತ್ತೀಚೆಗೆ ಮಂತ್ರಿ ಮಾಲ್ ನಲ್ಲಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಹಾಗೂ ಚಿತ್ರತಂಡದ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಉತ್ತರ ಕರ್ನಾಟಕದ ಪ್ರತಿಭೆ ಬಾಳು ಬೆಳಗುಂದಿ ಹಾಗೂ ಇಂದು ನಾಗರಾಜ್ ಹಾಡಿರುವ ಈ ಹಾಡನ್ನು ಬಾಳು ಬೆಳಗುಂದಿ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಅನೈರಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಾಳು ಬೆಳಗುಂದಿ ಅವರ ಗಾಯನಕ್ಕೆ  ಹಾಗೂ ಸಾಹಿತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ‌‌. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. 

ಕುರಿಗಾಹಿಯಾಗಿದ್ದ ನಾನು, ಅನೇಕ ಜನಪದ ಗೀತೆಗಳನ್ನು ರಚಿಸಿ ಹಾಡುತ್ತಿದ್ದೆ. ಆನಂತರ "ಸರಿಗಮಪ" ಸ್ಪರ್ಧಿಯಾದೆ. ಆ  ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಅವರು ನಿನ್ನಿಂದ ನನ್ನ ಸಿನಿಮಾವೊಂದರಲ್ಲಿ ಹಾಡಿಸುತ್ತೇನೆ ಅಂತ ಹೇಳಿದ್ದರು. ಈ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಅವರಿಗೆ, ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು ಗಾಯಕ ಹಾಗೂ ಗೀತರಚನೆಕಾರ ಬಾಳು ಬೆಳಗುಂದಿ.

"ಬ್ರ್ಯಾಟ್" ಎಂದರೆ ತರ್ಲೆ ಹುಡುಗ ಹಾಗೂ ದಾರಿ ತಪ್ಪಿದ ಮಗ ಎನ್ನಬಹುದು. ನಮ್ಮ ಚಿತ್ರ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದರು, ಅಪ್ಪ - ಮಗನ ಸ್ಟೋರಿಯೂ ಹೌದು. ಒಟ್ಟಿನಲ್ಲಿ ಇಡೀ ಚಿತ್ರದಲ್ಲಿ ನೋಡುಗರಿಗೆ ಬೇಸರವಾಗದ ಹಾಗೆ ಭರಪೂರ ಮನೋರಂಜನೆಯಿದೆ ಎಂದು ಹೇಳಬಹುದು. ಇನ್ನೂ ಸಿದ್ ಶ್ರೀರಾಮ್ ಹಾಡಿರುವ "ನಾನೇ ನೀನಂತೆ" ಹಾಡಂತೂ ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ಜನಪ್ರಿಯವಾಗಿದೆ. ಈಗ "ಗಂಗಿ ಗಂಗಿ" ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಬಾಳು ಬೆಳಗುಂದಿ ಹಾಗೂ ಇಂದು ನಾಗರಾಜ್ ಅದ್ಭುತವಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಕೂಡ ಅಷ್ಟೇ ಚೆನ್ನಾಗಿದೆ. ನನ್ನ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ ನಲ್ಲಿ ಬಂದಿದ್ದ "ಕೌಸಲ್ಯ ಸುಪ್ರಜಾ ರಾಮ" ಎಲ್ಲರ ಮನ ಗೆದ್ದಿತ್ತು. "ಬ್ರ್ಯಾಟ್" ಚಿತ್ರ ಕೂಡ ನವೆಂಬರ್ 14 ರಂದು ಬಿಡುಗಡೆಯಾಗುತ್ತಿದ್ದು, ಎಲ್ಲರಿಗೂ ಪ್ರಿಯವಾಗಲಿದೆ ಎಂದರು ನಿರ್ದೇಶಕ ಶಶಾಂಕ್.

ನಾನು ನೃತ್ಯ ಮಾಡಿ ಮೂರುನಾಲ್ಕು ವರ್ಷಗಳೇ ಆಗಿತ್ತು. ಈ ಹಾಡಿಗೆ ಈ ರೀತಿ ನೃತ್ಯ ಮಾಡಿದ್ದೇನೆ ಅಂದರೆ ಅದಕ್ಕೆ ನಿರ್ದೇಶಕ ಶಶಾಂಕ್ ಅವರೆ ಕಾರಣ. ಈ ಚಿತ್ರದಲ್ಲಿ ನನ್ನ ಲುಕ್ ಕೂಡ ಹೊಸತಾಗಿದೆ‌ . ಈ ಎಲ್ಲಾ ಕ್ರೆಡಿಟ್ ನಿರ್ದೇಶಕರಿಗೆ ಸೇರಬೇಕು. ಇನ್ನೂ "ಗಂಗಿ ಗಂಗಿ" ಹಾಡು ಇಷ್ಟು ಅದ್ದೂರಿಯಾಗಿ ಮೂಡಿ ಬರಲು ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರಿಗಿರುವ ಸಿನಿಮಾ ಪ್ರೀತಿ. ಇಡೀ ಸಿನಿಮಾ ಇಷ್ಟೇ ಅದ್ದೂರಿಯಾಗಿ ಮೂಡಿಬಂದಿದೆ. ಬಾಳು ಬೆಳಗುಂದಿ ಅವರ ಸಾಹಿತ್ಯ, ಗಾಯನ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಸೊಗಸಾಗಿದೆ ಎಂದು ನಾಯಕ ಡಾರ್ಲಿಂಗ್ ಕೃಷ್ಣ ತಿಳಿಸಿದರು.

 “ಫಸ್ಟ್ ರ‍್ಯಾಂಕ್ ರಾಜು” ಚಿತ್ರದ ನಂತರ ನಾವು ನಿರ್ಮಿಸಿರುವ ಚಿತ್ರ "ಬ್ರ್ಯಾಟ್". ಶಶಾಂಕ್ ಅವರ ಕಥೆ ಕೇಳಿ ಬಹಳ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಅವರ ಕಾಂಬಿನೇಶನ್ ನ ಮತ್ತೊಂದು ಸೂಪರ್ ಹಿಟ್ ಚಿತ್ರ ಇದಾಗಲಿದೆ ಎಂದರು ನಿರ್ಮಾಪಕ ಮಂಜುನಾಥ್ ಕಂದಕೂರ್.

ನಾನು ಕನ್ನಡದವಳು. ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ಈ ಚಿತ್ರದಲ್ಲಿ ನನ್ನದು ಮಧ್ಯಮವರ್ಗದ ಹುಡುಗಿ ಪಾತ್ರ. ಚಿತ್ರದಲ್ಲೂ ನನ್ನ ಪಾತ್ರದ ಹೆಸರು ಮನಿಶಾ. ಇಂದು ಬಿಡುಗಡೆಯಾಗಿರುವ "ಗಂಗಿ ಗಂಗಿ" ಹಾಡು ಬಹಳ ಚೆನ್ನಾಗಿದೆ ಎಂದು ನಾಯಕಿ ಮನಿಶಾ ಕಂದಕೂರ್ ಹೇಳಿದರು.  

ಚಿತ್ರದಲ್ಲಿ ನಟಿಸಿರುವ ಡ್ಯಾಗನ್ ಮಂಜು ಅವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಿದ್ವಾಯ್ ಸಂಸ್ಥೆಯ ವೈದ್ಯ ರಾಮಚಂದ್ರ ಹಾಗೂ ಬದರಿನಾಥ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು. ಆನಂದ್ ಆಡಿಯೋ ಮೂಲಕ "ಬ್ರ್ಯಾಟ್" ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶಶಾಂಕ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ``ಬ್ರ್ಯಾಟ್``(BRAT) ಚಿತ್ರದ ``ಗಂಗಿ ಗಂಗಿ`` ಹಾಡು ಬಿಡುಗಡೆಯಾಯಿತು - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95