ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇಬೇಕು, ಹಾಗಂತ ಎದುರಾಗುವ ಸಮಸ್ಯೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟು ಸರಿ, ನಾವು ಹೇಡಿಗಳಾಗಬಾರದು. ಸಾಯಲು ಮಾಡುವ ಧೈರ್ಯವನ್ನು ಬದುಕಲು ಮಾಡಿ ಎಂಬ ಸ್ಪೂರ್ತಿದಾಯಕ ಸಂದೇಶವನ್ನು ಹೇಳುವ ಪ್ರಯತ್ನ ಸೆಪ್ಟೆಂಬರ್ 10 ಚಿತ್ರದ ಮೂಲಕ ನಿರ್ದೇಶಕ ಸಾಯಿಪ್ರಕಾಶ್
ಮಾಡಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಾವು ಎಲ್ಲದಕ್ಕೂ ಪರಿಹಾರವಲ್ಲ, ಬದುಕಲು ಹಲವಾರು ಮಾರ್ಗಗಳಿವೆ ಎಂದು ಮಾನಸಿಕ ತಜ್ಞರ(ಶಶಿಕುಮಾರ್) ಮೂಲಕ ಮೆಸೇಜ್ ಹೇಳಲು ಪ್ರಯತ್ನಿಸಿದ್ದಾರೆ.
ಕಾನೂನು ಪ್ರಕಾರ ಸೂಸೈಡ್ ಅಪರಾಧ, ಧೈರ್ಯದಿಂದ ಬದುಕುವುದನ್ನು ಕಲಿಯಬೇಕೆಂದು ಹೇಳಿ ಅದಕ್ಕೆ ನಿದರ್ಶನವಾಗಿ ಒಂದಷ್ಟು ಘಟನೆಗಳನ್ನು ವಿವರಿಸುತ್ತಾ ಹೋಗುತ್ತಾರೆ.
ಕೂಲಿ ಕಾರ್ಮಿಕರಿಗೆ ಕೆಲಸ ನೀಡುವ ಹಳ್ಳಿಯ ಜಮೀನ್ದಾರ, ಮುದ್ದಾಗಿ ಬೆಳೆಸಿದ ಒಬ್ಬಳೇ ಮಗಳನ್ನು ಕಾಲೇಜಿಗೆ ಕಳಿಸುತ್ತಾನೆ. ಅದೇ ಕಾಲೇಜಿನಲ್ಲಿ ಓದುತ್ತಿರುವ, ಕೂಲಿ ಕಾರ್ಮಿಕನ ಮಗ, ತಾನು ಆಧುನಿಕ ರೈತನಾಗಿ ಬದುಕುವ ಕನಸು ಕಾಣುತ್ತಾನೆ. ಇದರ ನಡುವೆ ಜಮೀನ್ದಾರನ ಮಗಳು, ಈತನ ನಡುವೆ ಪ್ರೀತಿ ಬೆಳೆಯುತ್ತದೆ, ಮತ್ತೊಂದೆಡೆ ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ, ಅಳಿಯನಿಗೆ ವರದಕ್ಷಿಣೆ ಹಣ ಹೊಂದಿಸಲಾಗದೆ, ಮಗಳ ಪರಿಸ್ಥಿತಿ ಕಂಡು ಪರಿತಪಿಸುವ ತಂದೆ ತಾಯಿ. ಹಾಗೆಯೇ ತನ್ನ ಮಗಳು 99% ಅಂಕ ಪಡೆದು ವಿದೇಶಕ್ಕೆ ಹೋಗಬೇಕೆಂದು ಕನಸು ಕಾಣುವ ತಾಯಿ, ವಿದೇಶದಲ್ಲಿರುವ ಸ್ನೇಹಿತರ ಮಾತಿಗೆ ಕಟ್ಟುಬಿದ್ದು ಮಗಳ ಮೇಲೆ ಒತ್ತಡ ಹೇರುವ ತಾಯಿ. ಇನ್ನು ಪ್ರೀತಿಸಿ ಮದುವೆಯಾದವನೊಬ್ಬ ತನ್ನ ಪತ್ನಿಯ ಐಷಾರಾಮಿ ಬದುಕಿನ ಆಸೆ, ಆಡಂಬರಕ್ಕಾಗಿ ಸಾಲ ಮಾಡಿ ಪರದಾಡುವ ಪರಿಸ್ಥಿತಿ, ಮತ್ತೊಂದೆಡೆ ಕ್ರಿಕೆಟ್ ಮೇಲೆ ಹೆಚ್ಚು ಒಲವಿರುವ ಮಗನಿಗೆ ಓದಲು ಒತ್ತಡ ಹಾಕುವ ತಂದೆ,
ಹಣ, ಆಸ್ತಿ, ಅಂತಸ್ತು ಎಲ್ಲಾ ಇದ್ದರೂ ವ್ಯವಹಾರದಲ್ಲಿ ಮುಂದೆ ಬರಬೇಕೆಂದು ಒತ್ತಡ ಹಾಕುವ ಹೆಂಡತಿಯ ಕಾಟ ಸಹಿಸಲಾರದ ಪತಿ, ಇಂಥ ಹಲವಾರು ಸಮಸ್ಯೆಗಳನ್ನು ಎದುರಿಸಲಾರದೆ, ಜೀವನದಲ್ಲಿ ಜಿಗುಪ್ಸೆಗೊಂಡು ತಾನಿನ್ನು ಬದುಕೋದು ಅಸಾಧ್ಯ ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂಥವರಿಗೆಲ್ಲ ಈ ಚಿತ್ರ ಬದುಕಲು ಧೈರ್ಯ ತುಂಬುತ್ತದೆ. ಸೆಂಟಿಮೆಂಟ್ ಚಿತ್ರಗಳನ್ನೇ ಮಾಡಿಕೊಂಡು ಬಂದ ಸಾಯಿಪ್ರಕಾಶ್ ಅವರು ಈ ಮೂಲಕ ಸಂದೇಶಾತ್ಮಕ ಚಿತ್ರ ಮಾಡಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಅರ್ಥಪೂರ್ಣವಾಗಿದ್ದು, ಉತ್ತಮ ಸಂದೇಶ ನೀಡುವ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಎದುರಾದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿದ ಬಹಳಷ್ಟು ಜನ, ಸಾಧನೆ ಮಾಡಿ ಬದುಕಿನಲ್ಲಿ ಗೆದ್ದಿದ್ದಾರೆ. ಬದುಕನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಸಮಸ್ಯೆಯ ಸುಳಿಯಿಂದ ಹೊರಬರುವ ದಾರಿ ಕಂಡುಕೊಳ್ಳಿ, ಸಾವೇ ಎಲ್ಲದಕ್ಕೂ ಉತ್ತರವಲ್ಲ ಎಂಬ ವಿಚಾರ ಮನಮುಟ್ಟುತ್ತದೆ. ಇಂತಹ ಸಮಾಜಮುಖಿ ಚಿತ್ರಗಳಿಗೆ ಸರ್ಕಾರ ಬೆಂಬಲ ನೀಡಬೇಕಿದೆ. ಚಿತ್ರದ ಸಂಗೀತ ಹಾಗೂ ಸಾಹಿತ್ಯ ಅರ್ಥಪೂರ್ಣವಾಗಿದೆ. ಛಾಯಾಗ್ರಹಕರ ಕೆಲಸವೂ ಕೂಡ ಚೆನ್ನಾಗಿದೆ. ಶ್ರೀನಿವಾಸಮೂರ್ತಿ, ಪದ್ಮಾವಾಸಂತಿ ಸೇರಿದಂತೆ ಎಲ್ಲ ಪಾತ್ರಧಾರಿಗಳೂ ತಂತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.