ಚಿತ್ರ : ಕಮಲ್ ಶ್ರೀದೇವಿ
ನಿರ್ದೇಶನ : ವಿ.ಎ. ಸುನೀಲ್ ಕುಮಾರ್,
ನಿರ್ಮಾಣ : ಬಿ.ಕೆ. ಧನಲಕ್ಷ್ಮೀ, ಕ್ರಿಯೇಟಿವ್ ಹೆಡ್: ರಾಜವರ್ಧನ್,
ಸಂಗೀತ : ಕೀರ್ತನ್,
ಛಾಯಾಗ್ರಹಣ : ನಾಗೇಶ್ ಆಚಾರ್ಯ
ತಾರಾಗಣ : ಸಚಿನ್ ಚಲುವರಾಯಸ್ವಾಮಿ, ಸಂಗೀತಾ ಭಟ್, ಕಿಶೋರ್, ರಮೇಶ್ ಇಂದಿರಾ, ಮಿತ್ರಾ, ಎಂ.ಎಸ್.ಉಮೇಶ್, ಅಕ್ಷಿತಾ ಬೋಪಯ್ಯ, ರಾಘು ಶಿವಮೊಗ್ಗ ಹಾಗೂ ಇತರರು...
ಸಮಾಜದಲ್ಲಿ ಅನಾದಿ ಕಾಲದಿಂದಲೂ ಅಸಹಾಯಕ ಹೆಣ್ಣಿನ ಮೇಲೆ ಪುರುಷ ವರ್ಗ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಲೇ ಬಂದಿದೆ. ಅದನ್ನು ಅನೇಕ ಸಿನಿಮಾಗಳಲ್ಲಿ ಹೇಳುವ ಮೂಲಕ, ತಡೆಗಟ್ಟುವ ಕೆಲಸವೂ ನಡೆಯುತ್ತಲೇ ಬಂದಿದೆ. ಅಂಥ ಮತ್ತೊಂದು ಪ್ರಯತ್ನವೇ ಕಮಲ್ ಶ್ರೀದೇವಿ.
ಕಮಲ್ ಶ್ರೀದೇವಿ ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಘಟನೆಗಳನ್ನು ಒಳಗೊಂಡಿದೆ. ಅನುಮಾನಾಸ್ಪದವಾಗಿ ನಡೆದ ಆ ಕೊಲೆ ಮಾಡಿದವರಾರು ಎಂದು ಪೊಲೀಸರು ಅದರ ಬೆನ್ನತ್ತಿ ಹೋದಾಗ ಹಲವಾರು ಸತ್ಯಗಳ ಅನಾವರಣವಾಗುತ್ತದೆ. ಮದ್ಯಾಹ್ನ 11 ಗಂಟೆಗೆ ಆರಂಭವಾಗುವ ಈ ಕಥೆ ಮರುದಿನ ಸಂಜೆಗೆ ಕೊನೆಯಾಗುತ್ತದೆ. ಈ ಕಥೆ ನಡೆಯುವುದೂ ಬಹುತೇಕ ಫ್ಲಾಷ್ ಬ್ಯಾಕ್ ದೃಶ್ಯಗಳಲ್ಲಿ. ಚಿತ್ರದ ಕೊನೆಯವರೆಗೂ ಕೌತುಕವನ್ನು ಕಾಪಾಡಿಕೊಳ್ಳುವ ಕಾರಣದಿಂದ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಗೆಲುವು ಸಾಧಿಸಿದೆ.
ಮಗಳ ಚಿಕಿತ್ಸೆಗೆ ಒಂದೇ ದಿನದಲ್ಲಿ 70 ಸಾವಿರ ಹಣ ಹೊಂದಿಸುವ ಅನಿವಾರ್ಯತೆ ಇದ್ದ ಕಾರಣ, ತಾಯಿಯೊಬ್ಬಳು ಅನಿವಾರ್ಯವಾಗಿ ವೇಶ್ಯಾವಾಟಿಕೆಗಿಳಿಯಬೇಕಾಗುತ್ತೆ. ಒಬ್ಬ ಪಿಂಪ್ ಆಕೆಗೆ ಗಿರಾಕಿಗಳನ್ನು ಹೊಂದಿಸಿಕೊಡುತ್ತಾನೆ. ಒಂದೇ ದಿನದಲ್ಲಿ ಆಕೆ ಒಬ್ಬರಿಂದ ಹತ್ತು ಸಾವಿರದಂತೆ, 7 ಜನ ಗಿರಾಕಿಗಳನ್ನು ಭೇಟಿ ಮಾಡುತ್ತಾಳೆ. ಅ ಏಳು ಜನರಲ್ಲಿ ನಾಯಕ ಕಮಲ್(ಸಚಿನ್ ಚೆಲುವರಾಯಸ್ವಾಮಿ) ಕೂಡ ಒಬ್ಬ. ಇನ್ನೇನು70 ಸಾವಿರ ಹಣ ಜಮಾ ಆಯಿತು ಎನ್ನುವಷ್ಟರಲ್ಲಿ ಆಕೆಯ ಕೊಲೆ ಆಗಿಬಿಡುತ್ತದೆ. ಆ 7 ಜನರಲ್ಲಿ ಕೊಲೆ ಮಾಡಿದವರು ಯಾರು ಎನ್ನುವುದೇ ಕುತೂಹಲ. ಇದೇ ಕೌತುಕದಲ್ಲಿ ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ನಿರ್ದೇಶಕ ಸುನಿಲ್ ಸಫಲರಾಗಿದ್ದಾರೆ.
ಈ ಕೊಲೆ ಪ್ರಕರಣದ ಬೆನ್ನು ಹತ್ತುವ ಪೊಲೀಸರಿಗೆ ಹಲವರ ಮೇಲೆ ಅನುಮಾನ ಬರುತ್ತದೆ. ಪ್ರತಿಯೊಬ್ಬರನ್ನೂ ತನಿಖೆಗೆ ಒಳಪಡಿಸಿದಾಗ ಹೊಸ, ಹೊಸ ಕಥೆಗಳು ತೆರೆದುಕೊಳ್ಳುತ್ತವೆ. ಒಂದೊಂದು ಹಂತದಲ್ಲಿ ಒಬ್ಬೊಬ್ಬರ ಮೇಲೆ ಅನುಮಾನ ಮೂಡುತ್ತದೆ. ನಿಜಕ್ಕೂ ಆಕೆಯ ಕೊಲೆ ಮಾಡಿದವರ್ತಾರು ಎಂದು ತಿಳಿಯಲು ನೀವು ಕ್ಲೈಮ್ಯಾಕ್ಸ್ ವರೆಗೆ ಕಾಯಲೇಬೇಕು.
ವೇಶ್ಯಾವಾಟಿಕೆಗೆ ಬರುವ ಪ್ರತಿ ಮಹಿಳೆಯ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ. ಅದನ್ನು ಈ ಸಿನಿಮಾದಲ್ಲಿ ತೋರಿಸೋ ಮೂಲಕ ಚಿತ್ರಕಥೆಗೆ ಎಮೋಷನಲ್ ಟಚ್ ನೀಡಿದ್ದಾರೆ. ನಟಿ ಸಂಗೀತಾ ಭಟ್ ಶ್ರೀದೇವಿ ಯಾಗಿ ಚಾಲೆಂಜಿಂಗ್ ಆದಂಥ ಪಾತ್ರವನ್ನೇ ನಿರ್ವಹಿಸಿದ್ದಾರೆ. ಇಂಥ ಪಾತ್ರವನ್ನು ತಕ್ಷಣ ಯಾರೂ ಅಕ್ಸೆಪ್ಟ್ ಮಾಡಲ್ಲ. ಎಲ್ಲಿಯೂ ಅಶ್ಲೀಲ ಎನಿಸದ ರೀತಿಯಲ್ಲಿ ನಿರ್ದೇಶಕ ಸುನಿಲ್ ಕುಮಾ… ಅವರು ಎಲ್ಲ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಅಸಹಾಯಕ, ಫ್ಲಾಪ್ ನಿರ್ದೇಶಕ ಕಮಲ್ ಪಾತ್ರಕ್ಕೆ ನಾಯಕ ಸಚಿನ್ ಚೆಲುವರಾಯಸ್ವಾಮಿ ಜೀವ ತುಂಬಿ ಅಭಿನಯಿಸಿದ್ದಾರೆ. ಯಾವುದೇ ಬಿಲ್ಡಪ್, ಹೀರೋಯಿಸಂಗೆ ಇಲ್ಲಿ ಅವಕಾಶವಿಲ್ಲ.
ನಟ ಕಿಶೋರ್ ಐಪಿಎಸ್ ಅಧಿಕಾರಿಯಾಗಿ ಖಡಕ್ ಅಭಿನಯ ನೀಡಿದ್ದಾರೆ. ರಾಘು ಶಿವಮೊಗ್ಗ ಕೂಡ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಪಿಂಪ್ ಆಗಿ ರಮೇಶ್ ಇಂದಿರಾ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಬರುವ ಮಿತ್ರ ಗಮನ ಸೆಳೆಯುತ್ತಾರೆ. ಚಿತ್ರದ ಅವಧಿ ೨ ಗಂಟೆ ೨ ನಿಮಿಷ ಇದ್ದು, ಮೊದಲಾರ್ಧ ನಿಧಾನವಾಗಿ ಸಾಗುತ್ತದೆ, ಸೆಕೆಂಡ್ ಹಾಫ್ ನಲ್ಲಿ ವೇಗ ಪಡೆದುಕೊಳ್ಳುವ ಕಥೆ, ಕೊನೆಯ 20 ನಿಮಿಷ ಪ್ರೇಕ್ಷಕರ ಕಣ್ಗಳಲ್ಲಿ ಕಂಬನಿ ಮೂಡಿಸುತ್ತದೆ. ವೇಶ್ಯಾವಾಟಿಕೆಯಂತೇ, ಕೌಟುಂಬಿಕ ದೌರ್ಜನ್ಯವೂ ಸಹ ಎಷ್ಟು ಕ್ರೂರವಾಗಿರುತ್ತೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ.