ಆ ಹಳ್ಳಿಯಲ್ಲಿ ಅರಸಯ್ಯ(ಮಹಾಂತೇಶ್ ಹಿರೇಮಠ) ಎಂದರೆ ಎಲ್ಲರಿಗೂ ಗೊತ್ತು. ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡಿರುವ ಆತ ನೋಡಲು ಸ್ವಲ್ಪ ಕುರೂಪಿ, ಹಾಗಾಗಿ ಆತ ಮದುವೆ ವಯಸಿಗೆ ಬಂದಿದ್ದರೂ ಯಾವ ಹುಡುಗಿಯೂ ಆತನನ್ನು ಒಪ್ಪದಂಥ ಪರಿಸ್ಥಿತಿ, ಇಂಥಾ ಸಮಯದಲ್ಲಿ ಆತನಿಗೂ ಒಂದು ಲವ್ವಾಗುತ್ತದೆ, ಕೊನೆಗೂ ಆತ ಮದುವೆಯಾಗ್ತಾನಾ ಇಲ್ವಾ ಅನ್ನೋದೆ ಅರಸಯ್ಯನ ಪ್ರೇಮ ಪುರಾಣ. ಹಳ್ಳಿಯ ಜನರ ಬದುಕು, ಬವಣೆಯ ನಡುವೆ ಹುಟ್ಟಿದ ಒಂದು ಸುಂದರ ಪ್ರೇಮಕಥೆಯಿದು.
ಇಡೀ ಸಿನಿಮಾ ಹಾಸ್ಯಮಯವಾಗಿ ಮೂಡಿಬಂದಿದ್ದು, ವೀಕ್ಷಕರನ್ನು ನಗಿಸುತ್ತಲೇ ಕೊನೆಯಲ್ಲಿ ಸಂದೇಶ ಹೇಳುತ್ತದೆ. ಜಿಪುಣ ತಂದೆಯ ಮಗನಾದ ಅರಸಯ್ಯ ಹೃದಯದಲ್ಲಿ ಶ್ರೀಮಂತ. ಆದರೆ ನೋಡಲು ಕರ‍್ರಗೆ, ವಿಚಿತ್ರವಾಗಿದ್ದು, ತಲೆತುಂಬ ದಟ್ಟ ಕೂಡಲು, ಇದೆಲ್ಲ ಕಾರಣಗಳಿಂದ ಆತನಿಗೆ ಮದುವೆ ಎನ್ನುವುದು ಕನಸಾಗಿತ್ತು.
ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡಿದ್ದ ಅರಸಯ್ಯ ಹಾರ್ಮೋನಿಯಂ ವಾದಕ ಕೂಡ. ಸುತ್ತಲಿನ ಹತ್ತಾರು ಮನೆಗಳಲ್ಲಿ ಹರಿಕಥೆ ಮಾಡೋ ಆತ, ತಂದೆಯ ಜತೆ ಶಾಮಿಯಾನ ಅಂಗಡಿಯನ್ನೂ ನೋಡಿಕೊಳ್ಳುತ್ತಿದ್ದ.
ಅರಸಯ್ಯನಿಗೆ ಹಾರ್ಮೋನಿಯಂ, ಆರತಿ ತಟ್ಟೆ ಪುಡಿಗಾಸು ಬಿಟ್ಟರೆ ಹೇಳಿಕೊಳ್ಳೋ ಕೆಲಸ ಏನಿರಲ್ಲ. ಮೂರು ಎಕ್ರೆ ಜಮೀನು ಇದೆ ಎನ್ನುತ್ತಾ, ಹುಡುಗಿಯನ್ನು ಹುಡುಕಿ ದಳ್ಳಾಳಿ ಜತೆ ಮಾತುಕತೆಗೆ ಹೋದರೂ ಯಾವುದೇ ಹುಡುಗಿಯೂ ಈತನನ್ನು ಒಪ್ಪುತ್ತಿರಲ್ಲ.
ಇಂಥ ಸಮಯದಲ್ಲಿ ಆ ಊರಿನ ಪೋಸ್ಟ್ ಆಫೀಸ್‌ಗೆ ಒಬ್ಬ ಯುವತಿ(ರಶ್ಮಿತ ಗೌಡ) ಕೆಲಸಕ್ಕೆ ಬಂದು ಸೇರಿಕೊಳ್ಳುತ್ತಾಳೆ. ಅವಳನ್ನು ನೋಡಿದ ಅರಸಯ್ಯನಿಗೆ ಆಕೆಯ ಮೇಲೆ ಪ್ರೀತಿ ಉಂಟಾಗುತ್ತದೆ. ಆದರೆ ಕಪ್ಪುಬಣ್ಣದ, ಕುಳ್ಳಗೆ, ದುಂಡಗೆ ಗುಂಡನಂತಿದ್ದ ಕಿವುಡ ಅರಸಯ್ಯನಿಗೆ ಆ ಸುಂದರಿ ಒಲಿಯುವಳೇ, ಇಲ್ಲವೇ ಎನ್ನುವಲ್ಲಿಗೆ ಅರಸಯ್ಯನ ಪ್ರೇಮ ಪುರಾಣದ ಕಥೆ ಮುಗಿಯುತ್ತದೆ. ನಗಿಸುತ್ತಲೇ ಆರಂಭವಾಗುವ ಅರಸಯ್ಯನ ಪ್ರೇಮ ಪ್ರಸಂಗ ನಗುವಿನೊಂದಿಗೇ ಮುಕ್ತಾಯಗೊಳ್ಳುತ್ತದೆ.
ಮೇಘಶ್ರೀ ರಾಜೇಶ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಜೆ.ವಿ.ಆರ್. ದೀಪು ಹಾಸ್ಯಕ್ಕೆ ಒತ್ತುಕೊಟ್ಟು ನಿರೂಪಿಸಿದ್ದಾರೆ. ಅರಸಯ್ಯನಾಗಿ ಮಹಾಂತೇಶ್ ತನ್ನ ದೇಹಾಕೃತಿ, ಅಭಿನಯದ ಮೂಲಕವೇ ಪ್ರೇಕ್ಷಕರನ್ನು ನಗುಸುತ್ತ ಹಿಡಿದಿಟ್ಟುಕೊಳ್ಳುತ್ತಾರೆ, ನಾಯಕಿಯಾಗಿ ರಶ್ಮಿತಗೌಡ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಪೋಷಕ ಪಾತ್ರದಲ್ಲಿ ಬಸಲಿಂಗಯ್ಯನಾಗಿ ಪಿ.ಡಿ.ಸತೀಶ್ ಸಖತ್ ನಗಿಸುತ್ತಾರೆ, ಪ್ರವೀಣ್ ಬಿ.ವಿ. ಮತ್ತು ಪ್ರದೀಪ್ ಬಿ.ವಿ. ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ,
ವೈದ್ಯರನ್ನು ನಂಬದ ಊರ ಜನ, ಜ್ಯೋತಿಷಿಯ ಮಾತನ್ನು ನಂಬುತ್ತಾರೆ. ಜ್ಯೋತಿಷ್ಯರೇ ಜಾತಕ ಸರಿ ಇಲ್ಲ ಎಂದಾಗ ಮದುವೆ ಹಂತಕ್ಕೆ ಬಂದ ಸಂಬಂಧ ಮುರಿಯೋ ಹಂತಕ್ಕೆ ಬರುತ್ತದೆ. ಹಠಕ್ಕೆ ಬಿದ್ದ ಅರಸಯ್ಯ ಕಡೆಗೂ ಮದ್ವೆ ಆಗ್ತಾನಾ? ಅಥವಾ ಜಾತಕ ನಂಬಿ ತಂದೆಗೆ ಬರೋ ಸಾವು ತಪ್ಪಿಸ್ತಾನಾ? ಆ ಹುಡುಗಿಯ ಕಥೆ ಏನಾಯ್ತು? ಅಜ್ಜಿ ಕೇಳ್ತಾ ಇದ್ದ ರೇಡಿಯೋ ಏನಾಯ್ತು? ಇದೆಲ್ಲದಕ್ಕೆ ಉತ್ತರ ಅರಸಯ್ಯನ ಪ್ರೇಮಪ್ರಸಂಗ ಸಿನಿಮಾದಲ್ಲಿದೆ. ಹಿತಮಿತವಾದ ಹಾಸ್ಯ ಪ್ರಹಸನಗಳು, ಉತ್ತಮ ಹಾಡುಗಳು, ಹಳ್ಳಿಯ ಜನಜೀವನ, ಪಂಚ್ ಡೈಲಾಗ್‌ಗಳು ಈ ಸಿನಿಮಾದಲ್ಲಿ ಇನ್ನಷ್ಟು ಮಜಾ ಕೊಡುತ್ತದೆ. ಎಲ್ಲಾ ಕಲಾವಿದರೂ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಚಿತ್ರದ ಸಂಗೀತ, ಛಾಯಾಗ್ರಹಣ ಉತ್ತಮವಾಗಿದೆ.