ಗ್ರಾಮೀಣ ಸೊಗಡಿನ ಸಾಕಷ್ಟು ಪ್ರೇಮ ಕಥೆಗಳನ್ನು ನಾವೆಲ್ಲ ತೆರೆ ಮೇಲೆ ನೋಡಿದ್ದೇವೆ. ಆದರೆ ಅದೇ ಸೊಗಡಿನಲ್ಲಿ ಥ್ರಿಲ್ಲರ್ ಲವ್ ಸ್ಟೋರಿಯನ್ನು `ದಕ್ಷಯಜ್ಞ`, `ತರ್ಲೆ ವಿಲೇಜ್` ಖ್ಯಾತಿಯ ಜಿಬಿಎಸ್ ಸಿದ್ದೇಗೌಡ ಅವರು ನಿರ್ದೇಶಿಸಿದ್ದಾರೆ. ಆ ಚಿತ್ರದ ಹೆಸರು ಕುಂಟೆಬಿಲ್ಲೆ. ಇದೇ ಶುಕ್ರವಾರ ತೆರೆ ಕಾಣುತ್ತಿರುವ ಈ ಚಿತ್ರದ ಮೂಲಕ ಯುವನಟ ಯದು ಮೊದಲ ಬಾರಿಗೆ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡ ಅಲ್ಲದೆ ಭೋಜ್ ಪುರಿ ಭಾಷೆ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಮೇಘಶ್ರೀ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಮಾದ್ಯಮಗೋಷ್ಟಿಯಲ್ಲಿ ಚಿತ್ರತಂಡ ಹೆಚ್ಚಿನ ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ ಸಿದ್ದೇಗೌಡರು ಮಾತನಾಡುತ್ತ ಚಿಕ್ಕ ವಯಸ್ಸಿನಲ್ಲಿ ಹೆಚ್ಚಾಗಿ ಹಳ್ಳಿಗಳಲ್ಲಿ ಆಡುತ್ತಿದ್ದ ಆಟ ಕುಂಟೆಬಿಲ್ಲೆ. ಅದರ ಹಿನ್ನೆಲೆಯಲ್ಲಿ ಪ್ರೀತಿ, ನೋವು, ಕಾಮದಂಥ ಅಂಶಗಳನ್ನು ಥ್ರಿಲ್ಲರ್ ಕಥೆಯೊಂದಿಗೆ ಹೇಳೋ ಪ್ರಯತ್ನ ಮಾಡಿದ್ದೇವೆ ಹಳ್ಳಿಯ ಸೊಗಡಿನ ಲವ್, ಸಸ್ಪೆನ್ಸ್ ಕಥಾಹಂದರ ಚಿತ್ರದಲ್ಲಿದೆ. ನಮ್ಮ ಕೈಯಾರೆ ನಾವೇ ನಮ್ಮ ಪ್ರೀತಿಯನ್ನು ಹೇಗೆ ಹಾಳು ಮಾಡಿಕೊಳ್ಳುತ್ತೇವೆ ಎಂಬುದರ ಸುತ್ತ ಚಿತ್ರಕಥೆ ಸಾಗುತ್ತದೆ. ಇದೇ 26ರಂದು ಚಿತ್ರ ತೆರೆಗೆ ಬರುತ್ತಿದ್ದು ನಿಮ್ಮೆಲ್ಲರ ಸಹಕಾರ ಬೇಕು. ಅಲ್ಲದೆ ನಮ್ಮ ಚಿತ್ರದ ಬಗ್ಗೆ ನಮಗೆ ಭರವಸೆ ಇದೆ. ನಮ್ಮ ಚಿತ್ರ ತೆರೆಗೆ ಬಂದ ಒಂದು ವಾರದಲ್ಲಿಯೇ "ಕಾಂತಾರ" ಬರುತ್ತಿದೆ. ಆದರೆ, ಅದರಿಂದ ನಮಗೇನೂ ಭಯವಿಲ್ಲ. ಪ್ರೇಕ್ಷಕರು ನಮ್ಮ ಚಿತ್ರವನ್ನು ಇಷ್ಟಪಟ್ಟು ನೋಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ"ಎಂದರು.
ನಾಯಕನ ತಂದೆ ಹಾಗೂ ನಿರ್ಮಾಪಕರೂ ಆದ ಜಿ.ಕುಮಾರ್ ಗೌಡ ಮಾತನಾಡುತ್ತ, ನಾವು ಹಲವು ತಿಂಗಳಿನಿಂದ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ನನ್ನ ಮಗ ಉತ್ತಮ ನಟನಾಗಬೇಕೆನ್ನುವುದು ನನ್ನ ಬಯಕೆ. 30 ವರ್ಷದ ಹಿಂದೆ ನಾನೂ ಕಲಾವಿದನಾಗಬೇಕೆಂದು ಬೆಂಗಳೂರಿಗೆ ಬಂದಿದ್ದೆ, ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನಮ್ಮಚಿತ್ರಕ್ಕೆ ನಿಮ್ಮ ಸಹಕಾರ ಬೆಂಬಲ ಬೇಕು ಎಂದರು.
ನಾಯಕ ಯದು ಮಾತನಾಡಿ "ನನ್ನ ತಂದೆಯವರ ಆಸೆ ಈಡೇರಿಸುವ ಸಲುವಾಗಿ ನಾನು ಈ ಕ್ಷೇತ್ರಕ್ಕೆ ಬಂದೆ. ಕ್ರಿಕೆಟ್ ಆಟಗಾರನಾಗಬೇಕೆನ್ನುವ ಆಸೆ ನನಗಿತ್ತು. ಅದಕ್ಕಾಗಿ ತರಬೇತಿ ಸಹ ಪಡೆಯುತ್ತಿದ್ದೆ. ಆದರೆ ತಂದೆಯ ಆಸೆ ಈಡೇರಿಸುವುದಕ್ಕಾಗಿ ಅದನ್ನು ಅರ್ಧಕ್ಕೇ ಬಿಟ್ಟು ಬಂದೆ. ರಂಗಭೂಮಿಯ ತರಬೇತಿ ಪಡೆದು ಆ್ಯಕ್ಟ್ ಮಾಡಿದ್ದೇನೆ. ಈ ಚಿತ್ರದಲ್ಲಿ ಒಬ್ಬ ಕೋಳಿ ಫಾರಂನಲ್ಲಿ ಕೆಲಸ ಮಾಡುವ ಯುವಕನಾಗಿ ಕಾಣಿಸಿಕೊಂಡಿದ್ದು, ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಅವನು ಏನಲ್ಲ ಸಾಹಸ ಮಾಡುತ್ತಾನೆ ಎನ್ನುವುದು ಚಿತ್ರದ ಕಥಾಹಂದರ ಎಂದರು.
ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಸುಧಾ ಬೆಳವಾಡಿ " ಕನ್ನಡ ಚಿತ್ರರಂಗ ಸ್ವಲ್ಪ ಕಷ್ಟದಲ್ಲಿದೆ, ಹಾಗಾಗಿ ಮಾದ್ಯಮದವರು ಈ ಚಿತ್ರಕ್ಕೆ ಬೆಂಬಲ ಕೊಡಬೇಕು. ಯಾವುದೇ ದೊಡ್ದ ಸ್ಟಾರ್ ನಟರಾದರೂ ತಾವು ಅಭಿನಯಿಸಿದ ಚಿತ್ರಗಳ ಪ್ರಮೋಷನ್ ಗೆ ಬರಬೇಕು, ಬೆಂಬಲಿಸಬೇಕು" ಎಂದು ಹೇಳಿದರು.
ನಾಯಕ ನಟಿ ಮೇಘಶ್ರೀ ಮಾತನಾಡಿ "ನನ್ನದು ಬಹಳ ಬೋಲ್ಡ್ ಆದಂಥ ಪಾತ್ರ. ಇಂಥಾ ಪಾತ್ರ ಮಾಡುವುದು ಸುಲಭವಲ್ಲ. ಈ ಕಥೆಯೇ ವಿಶೇಷವಾಗಿದೆ ಹಾಗೂ ಪಾತ್ರವೂ ಸ್ಪೆಷಲ್ ಆಗಿರುವುದರಿಂದಲೇ ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಯಾಕೆಂದರೆ ಇಡೀ ಚಿತ್ರದ ಕಥೆ ನನ್ನ ಮೇಲೆ ನಡೆಯುತ್ತದೆ. ನನ್ನ ಪಾತ್ರಕ್ಕೆ ವಿಶೇಷ ಮಹತ್ವವಿದೆ. ಚಿತ್ರದಲ್ಲಿ ಒಂದು ವಿಶೇಷ ದೃಶ್ಯವಿದೆ, ಅದನ್ನು ನೋಡಿದರೆ ನೀವೆಲ್ಲಾ ಬೆಚ್ಚಿ ಬೀಳುತ್ತೀರಿ. ಅಂತಹಾ ವಿಶೇಷ ಕಥೆಯುಳ್ಳ ಚಿತ್ರವಿದು. ನಾನು ಈ ಚಿತ್ರದಲ್ಲಿ ಕುಂಟೆಬಿಲ್ಲೆ, ವಾಲಿಬಾಲ್ ಸೇರಿ ಸಾಕಷ್ಟು ಆಟಗಳನ್ನು ಆಡಿದ್ದೇನೆ." ಎಂದು ಹೇಳಿದರು.
ಜೀವಿತಾ ಕ್ರಿಯೇಷನ್ಸ್ ಮೂಲಕ ಎಸ್ ಬಿ ಶಿವ ಹಾಗೂ ಕುಮಾರ ಗೌಡ ಜಿ. ನಿರ್ಮಿಸಿರುವ ಈ ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ ಬರೆದಿದ್ದಾರೆ. ಹರಿಕಾವ್ಯ ಸಂಗೀತ ಸಂಯೋಜನೆಯ ಮೂರು ಹಾಡುಗಳು ಚಿತ್ರದಲ್ಲಿದ್ದು, ಮುಂಜಾನೆ ಮಂಜು ಅವರ ಛಾಯಾಗ್ರಹಣವಿದೆ. ಯದು, ಮೇಘಶ್ರೀ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ, ಶಂಕರ ಅಶ್ವಥ್, ಬಲ. ರಾಜವಾಡಿ, ಭವಾನಿ ಪ್ರಕಾಶ್, ಕಾವ್ಯ ಮುತಾದವರು ಅಭಿನಯಿಸಿದ್ದಾರೆ. ಚಿತ್ರ ಇದೇ ಸೆಪ್ಟೆಂಬರ್ 26ಕ್ಕೆ ತೆರೆಗೆ ಬರುತ್ತಿದೆ.