ಸಮಾರಂಭದಲ್ಲಿ ಹಿರಿಯ ಕಲಾವಿದೆ ಪದ್ಮಶ್ರೀ ಪುರಸ್ಕೃತರಾದ ಡಾ॥ ಭಾರತಿ ವಿಷ್ಣುವರ್ಧನ್, ಸಾಹಿತಿ ಜೋಗಿ ಹಾಗೂ ಪ್ರಕಾಶಕ ಜಮೀಲ್ ಸಾವಣ್ಣ ಉಪಸ್ಥಿತಿ .
ನಟನಾಗಿ ಕನ್ನಡಿಗರ ಮನ ಗೆದ್ದಿರುವ ಅನಿರುದ್ಧ ಜತಕರ ಉತ್ತಮ ಲೇಖಕರು ಹೌದು. ಇತ್ತೀಚೆಗೆ ಅನಿರುದ್ಧ ಅವರು ಬರೆದಿರುವ `ಸಾಲುಗಳ ನಡುವೆ` ಎಂಬ ಪುಸ್ತಕದ ಅನಾವರಣ ಸಮಾರಂಭ ಜಯನಗರದ ಡಾ||ವಿಷ್ಣುವರ್ಧನ್ ಅವರ ನಿವಾಸ "ವಲ್ಮೀಕ"ದಲ್ಲಿ ನೆರವೇರಿತು. ಹಿರಿಯ ಕಲಾವಿದೆ ಪದ್ಮಶ್ರೀ ಪುರಸ್ಕೃತರಾದ ಡಾ॥ ಭಾರತಿ ವಿಷ್ಣುವರ್ಧನ್, ‘ಸಾಲುಗಳ ನಡುವೆ’ ಪುಸ್ತಕವನ್ನು ಅನಾವರಣ ಮಾಡಿದರು. ಸಾಹಿತಿ ಜೋಗಿ ಹಾಗೂ ಪ್ರಕಾಶಕ ಜಮೀಲ್ ಸಾವಣ್ಣ ಅವರು ಉಪಸ್ಥಿತರಿದ್ದರು. ನಂತರ ಈ ಕುರಿತು ಅತಿಥಿಗಳು ಹಾಗೂ ಲೇಖಕರು ಮಾತನಾಡಿದರು.
ನಾನು ಬರೆದಿರುವ `ಸಾಲುಗಳ ನಡುವೆ` ಪುಸ್ತಕವನ್ನು ಕರ್ನಾಟಕ ರತ್ನ ಡಾ||ವಿಷ್ಣುವರ್ಧನ್ ಅವರಿಗೆ ಅರ್ಪಿಸುತ್ತೇನೆ ಎಂದು ಮಾತು ಆರಂಭಿಸಿದ ಲೇಖಕ ಅನಿರುದ್ಧ ಜತಕರ, ನಾನು ಬರವಣಿಗೆ ಆರಂಭಿಸಿದ್ದು 2008 ರಲ್ಲಿ. ಹಿರಿಯ ನಿರ್ದೇಶಕ ಎಂ.ಎಸ್ ಸತ್ಯು ಅವರ `ಇಜ್ಜೋಡು` ಚಿತ್ರದಲ್ಲಿ ನಟಿಸುವಾಗ ಆ ಚಿತ್ರದ ಒಂದು ಸಂಭಾಷಣೆ ನನಗೆ ಈ ರೀತಿ ಹೇಳಿದರೆ ಚೆನ್ನಾಗಿರುತ್ತದೆ ಎನಿಸಿತು. ಅದನ್ನು ಸತ್ಯು ಅವರ ಬಳಿ ಹೇಳಿದೆ. ಅವರು ತುಂಬಾ ಚೆನ್ನಾಗಿದೆ ಅಂತ ಹೇಳಿ ನನ್ನ ಸಂಭಾಷಣೆಯನ್ನೇ ಓಕೆ ಮಾಡಿದರು. ಆನಂತರ 6 ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿದ್ದೇನೆ. ಭಾರತಿ ಅಮ್ಮ ಅವರ ಕುರಿತು ಮಾಡಿದ ಸಾಕ್ಷ್ಯಚಿತ್ರಕ್ಕೂ ನಾನೇ ಬರೆದಿದ್ದೇನೆ. ಆ ಚಿತ್ರಕ್ಕೆ ನನಗೆ ರಾಷ್ಟ್ರಪ್ರಶಸ್ತಿ ಕೂಡ ಬಂದಿದೆ. ಆನಂತರ ಕನ್ನಡದ ಹಾಗೂ ಆಂಗ್ಲ ಭಾಷೆಯ ಪ್ರಮುಖ ದಿನಪತ್ರಿಕೆಗಳಿಗೆ ಲೇಖನ ಬರೆದಿದ್ದೇನೆ. ಇದನ್ನೆಲ್ಲಾ ಗಮನಿಸಿದ ನನ್ನ ತಾಯಿ ಈ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರಲು ಹೇಳಿದರು. ಆ ಲೇಖನಗಳ ಜೊತೆಗೆ ಕೆಲವು ಹೊಸ ಲೇಖನಗಳು ಸೇರಿಸಿದ್ದೇನೆ. ಅದೇ ಇಂದು ಬಿಡುಗಡೆಯಾಗಿರುವ `ಸಾಲುಗಳ ನಡುವೆ` ಪುಸ್ತಕ. ಇದು ನಲವತ್ತು ಪ್ರಬಂಧಗಳ ಸಂಕಲನ. ಈ ಪುಸ್ತಕವನ್ನು ಬಿಡುಗಡೆ ಮಾಡಿಕೊಟ್ಟ ಭಾರತಿ ಅಮ್ಮ ಅವರಿಗೆ, ಜೋಗಿ ಅವರಿಗೆ, ಪ್ರಕಾಶಕರಾದ ಜಮೀಲ್ ಸಾವಣ್ಣ ಅವರಿಗೆ ಹಾಗೂ ವಿಶೇಷವಾಗಿ ನನ್ನ ತಂದೆ ತಾಯಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ ಎಂದರು.
ಅನಿರುದ್ಧ ಅವರಿಗೆ ಬರವಣಿಗೆ ಅವರ ಕುಟುಂಬದಿಂದ ಬಂದಿದೆ. ಅವರ ತಂದೆ, ತಾಯಿ ಎಲ್ಲರೂ ಒಳ್ಳೆಯ ಬರಹಗಾರರು. ಇಂದು ಅನಿರುದ್ದ ಅವರು ಬರೆದಿರುವ `ಸಾಲುಗಳ ನಡುವೆ` ಪುಸ್ತಕ ಬಿಡುಗಡೆಯಾಗಿದೆ. ಇದನ್ನು ನಮ್ಮ ಯಜಮಾನರು ವಿಷ್ಣುವರ್ಧನ್ ಅವರು ನೋಡಿದ್ದರೆ ಬಹಳ ಖುಷಿ ಪಡುತ್ತಿದ್ದರು. ಈಗಲೂ ಎಲ್ಲಿಂದಲೊ ಆಶೀರ್ವಾದಿಸಿರುತ್ತಾರೆ ಎಂದು ಭಾರತಿಯವರು ತಿಳಿಸಿದರು.
ಸಿನಿಮಾ ಪತ್ರಕರ್ತನಾಗಿ ಅನೇಕ ಬಾರಿ ವಿಷ್ಣುವರ್ಧನ್ ಅವರ ಸಂದರ್ಶನಕ್ಕೆ ಈ ಮನೆಗೆ ಬಂದಿದ್ದೇನೆ. ಅವರ ಜೊತೆಗೆ ಹಲವಾರು ಗಂಟೆಗಳನ್ನು ಕಳೆದಿದ್ದೇನೆ. ಇಂದು ಅದೆಲ್ಲಾ ನೆನಪಾಯಿತು. ಇನ್ನೂ, ಅನಿರುದ್ಧ ಜತಕರ ಅವರನ್ನು ಇಪ್ಪತ್ತೈದು ವರ್ಷಗಳಿಂದ ಬಲ್ಲೆ. ಅನಿರುದ್ಧ ಹಾಗೂ ಅವರ ಸಹೋದರಿ ಅರುಂಧತಿ ಇಬ್ಬರು ಅನೇಕ ನಾಟಕ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಈಗ ಅನಿರುದ್ಧ ಅವರು ‘ಸಾಲುಗಳ ನಡುವೆ’ ಎಂಬ ಪುಸ್ತಕ ಬರೆದಿದ್ದಾರೆ. ಅದನ್ನು ನಾನು ಓದಿದ್ದೇನೆ. ಕೆಲವು ಪ್ರಬಂಧಗಳು ಮನಸ್ಸಿಗೆ ಬಹಳ ಹತ್ತಿರವಾದವು ಎಂದು ಸಾಹಿತಿ ಜೋಗಿ ತಿಳಿಸಿದರು.
ಪ್ರಕಾಶಕ ಜಮೀಲ್ ಸಾವಣ್ಣ ಅವರು ಸಹ "ಸಾಲುಗಳ ನಡುವೆ" ಪುಸ್ತಕದ ಕುರಿತು ಮಾತನಾಡಿದರು.