ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕರಾದ ಕೆ ಎಂ ರಘು ಏನಂತಾರೆ ?
ನನ್ನೂರು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಬರುವ 40ಮನೆಗಳು ಇರುವ ಕೆಬ್ಬೆಕೊಪ್ಪಲು ಎಂಬ ಸಣ್ಣ ಗ್ರಾಮ.
ನಾನು ಪ್ರೈಮರಿ ಸ್ಕೂಲ್ ಓದುವ ಸಂದರ್ಭದಲ್ಲಿ ಬೀದಿ ಕಂಬಗಳಲ್ಲಿ ಬಲ್ಪ್ ಉರಿಯುತಿದ್ದದ್ದು ಬಿಟ್ಟರೆ ಯಾರ ಮನೆಯಲ್ಲೂ ಕರೆಂಟ್ ಇರಲಿಲ್ಲ. ಅಂತ ಗ್ರಾಮದಲ್ಲಿ ಹುಟ್ಟಿದ ನನಗೆ ಸಿನಿಮಾ ಆಸಕ್ತಿ ಬರಲು ಕಾರಣ ಆ ಸಂದರ್ಭದಲ್ಲಿ ನನ್ನೂರಿನಲ್ಲಿ ವರ್ಷಕ್ಕೆ ಒಮ್ಮೆ ಮಾಡುತಿದ್ದ ಪೌರಾಣಿಕ ನಾಟಕಗಳು ತುಂಬಾ ಪರಿಣಾಮ ಬೀರಿದೊ. ನಮ್ಮ ತಂದೆಯವರು ಸಹ ಯಾವುದೇ ನಾಟಕ ಮಾಡಿದರು ಮುಖ್ಯ ಪಾತ್ರವನ್ನೇ ಮಾಡುತ್ತಿದುದ್ದರಿಂದ ನಾನು ಮೇಳದ ಮನೆಗೆ ಹೋಗಿ ಮೇಳ ಮುಗಿಯುವ ವರೆಗೂ ಆರ್ಮೋನಿಯಂ ಮಾಸ್ಟ್ರು ಹೇಳಿಕೊಡುವ ಬಗೆ, ಪಾತ್ರದಾರಿಗಳ ಹಾಡುಗಾರಿಕೆ, ಮಾತುಗಾರಿಕೆ, ಅವರ ಅಭಿನಯ ಎಲ್ಲಾ ತುಂಬಾ ಆಸಕ್ತಿ ಇಂದ ಗಮನಿಸುತಿದ್ದೆ.
ನಾನು ಹೈ ಸ್ಕೂಲ್ ಗೆ ಬಂದಾಗ ಹೆಚ್ಚು ಸಿನಿಮಾಗಳನ್ನ ನೋಡುವ ಪರಿಪಾಟ ಸುರುಮಾಡಿಕೊಂಡೆ, ಹಾಗೆ ಹಲವಾರು ಕಥೆಗಳನ್ನ ಬರೆಯುವ ಅಭ್ಯಾಸ ಕೂಡ ಮಾಡಿಕೊಂಡೆ.
ಕಾಲೇಜ್ ಸಂದರ್ಭದಲ್ಲಿ ನಾನು ಸಿನಿಮಾ ಕ್ಷೇತ್ರಕ್ಕೆ ಹೋಗಬೇಕು. ನಿರ್ದೇಶಕನಾಗಬೇಕು ಎಂಬ ನಿರ್ಧಾರ ಮಾಡಿದೆ. ಈ ವಿಚಾರ ತಿಳಿದ ಸ್ನೇಹಿತರು ನನ್ನನ್ನ ನಕ್ಕು ವ್ಯಂಗ್ಯ ಮಾಡಿದ್ದು ಇದೇ. ಕಾರಣ ಬೆಂಗಳೂರು ಎಂಬ ಮಹಾನಗರದಲ್ಲಿ ನಲವತ್ತು ಮನೆಗಳಿದ್ದ ಕೆಬ್ಬೆಕೊಪ್ಪಲಿನಲ್ಲಿ ಆಡಿ ಬೆಳದ ನಾನು ಬೆಂಗಳೂರಿಗೆ ಹೋಗಿ ನಿರ್ದೇಶಕನಾಗಲು ಹೇಗೆ ಸಾಧ್ಯ? ಎಂಬುವುದು ಹಲವರ ಯಕ್ಷಪ್ರಶ್ನೆ ಆಗಿತ್ತು.
ಪಿಯುಸಿ ಮುಗಿಸಿ ಬೆಂಗಳೂರಿಗೆ ಬಂದ ನಾನು, ಸುಮಾರು ಒಂದು ವರ್ಷಗಳ ಕಾಲ ಹೋಟೆಲ್ ನಲ್ಲಿ ಕೆಲಸ, ಲಾರಿ ಕ್ಲೀನರ್ ಕೆಲಸ ಮಾಡಿ ಕೊನೆಗೆ ನಮ್ಮ ಕ್ಷೇತ್ರದ ಶಾಸಕರಾಗಿದ್ದ ಎ. ಮಂಜಣ್ಣನವರ ಸಹಕಾರದಿಂದ ಸಾಹಿತಿಗಳಾದ ಕೋಟಿಗಾನಹಳ್ಳಿ ರಾಮಣ್ಣ ನವರ ಭೇಟಿ ಮಾಡುವ ಅವಕಾಶ ದೊರಕಿತು. ಅವರು ನನಗೆ ಸಂಭ್ರಮ, ಸೈನಿಕ, ಸಿನಿಮಾ ನಿರ್ದೇಶಕರಾದ ಮಹೇಶ್ ಸುಖಧರೆ ಅವರನ್ನ ಪರಿಚಯ ಮಾಡಿಕೊಟ್ಟರು. ನಾನು ಮಹೇಶ್ ಸುಖಧರೆ ಅವರೊಟ್ಟಿಗೆ ಹಲವಾರು ಕೇಂದ್ರ ಸರ್ಕಾರದ ಡಾಕ್ಯುಮೆಂಟರಿ, ರಾಜ್ಯ ಸರ್ಕಾರದ ಡಾಕ್ಯುಮೆಂಟರಿ, ಜೊತೆಗೆ ಸಿನಿಮಾಗಳ ಕೆಲಸ ಕೂಡ ಮಾಡಿದೆ. ಬೇರೆ ಬೇರೆ ನಿರ್ದೇಶಕರ ಜೊತೆಗೂ ಹಲವು ಸಿನಿಮಾ ಕೆಲಸ ಮಾಡಿದೆ.
ನಂತರ ನನ್ನ ಅಣ್ಣ ಲೋಕೇಶ್ ಅವರ ಸಹಾಯದಿಂದ ಹಾಗು ನಮ್ಮ ಸೋದರ ಮಾವ ರವಿ ಅವರ ಸಹಕಾರದಿಂದ ಮಲೆಮಹದೇಶ್ವರ ದೇವರ ಕುರಿತು ಇಪ್ಪತ್ತಕ್ಕು ಹೆಚ್ಚು ಸಾಹಿತ್ಯ ಬರೆದು ವಿಡಿಯೋ ಚಿತ್ರೀಕರಿಸಿ ಬಿಡುಗಡೆ ಮಾಡಿದೆ.
2015 ರಲ್ಲಿ ಸ್ನೇಹಿತರಾದ ಸಿದ್ದೇಗೌಡ ಎಂಬುವವರು ದಕ್ಷಿಯಜ್ಞ ಎಂಬ ಪೌರಾಣಿಕ ಸಿನಿಮಾ ಮಾಡುತಿದ್ದೇನೆ ನೀನೇ ನಿರ್ದೇಶನ ಮಾಡು ನಾನು ಮೃಗು ಎಂಬ ಒಂದು ದೊಡ್ಡ ಪಾತ್ರ ಮಾಡುತಿದ್ದೇನೆ ಎಂದು ಕೇಳಿಕೊಂಡಾಗ ನಾನು ಆ ಚಿತ್ರವನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಿಕೊಡುವುದರ ಜೊತೆಗೆ ಸಿನಿಮಾ ರಿಲೀಸ್ ಮಾಡುವ ತನಕ ಸಿದ್ದೇಗೌಡರ ಜೊತೆಗೆ ನಿಂತೆ.
ನಂತರ ನೀನೇ ನಿನ್ನ ಹೆಸರಲ್ಲಿ ಒಂದು ಸಿನಿಮಾ ನಿರ್ದೇಶನ ಮಾಡು ನಾನು ಹಣ ಹಾಕುತ್ತೇನೆ ಆದರೆ ಸಣ್ಣ ಬಜೆಟ್ ನಲ್ಲಿ ಮುಗಿಸಿಕೊಡಬೇಕು ಎಂದರು. ನಾನು ಸರಿ ಎಂದು ಹೇಳಿ ಆಗ ತರ್ಲೆವಿಲೇಜ್ ಸಿನಿಮಾ ಮಾಡಿದೆ. ಅದು ಗಾಂಧಿನಗರದಲ್ಲಿ ಸದ್ದು ಗದ್ದಲ ಮಾಡುವುದರ ಜೊತೆಗೆ ನಿರ್ಮಾಪಕರಿಗೆ ಹಣವನ್ನು ತಂದುಕೊಟ್ಟಿತು.
ನಂತರ ಪರಸಂಗ ಸಿನಿಮಾ ಮಾಡಿದೆ. ಆನಂತರ ಶುರುಮಾಡಿದ್ದೆ ದೊಡ್ಡಹಟ್ಟಿ ಬೋರೇಗೌಡ, ಸ್ನೇಹಿತ ಬಿ.ಎಸ್ ಶಶಿಕುಮಾರ್ ಅವರ ಹಾಗು ನಮ್ಮ ಅಣ್ಣನವರಾದ ಲೋಕೇಶ್ ರವರ ಸಹಕಾರದೊಂದಿಗೆ ರಾಜರಾಜೇಶ್ವರಿ ಕಂಬೈನ್ಸ್ ಸಂಸ್ಥೆಯೊಂದಿಗೆ ಈ ಚಿತ್ರ ಪ್ರಾರಂಭವಾಯಿತು, ಸಂಪೂರ್ಣವಾಗಿ ಹೊಸ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ಅವರಿಗೆ ಸುಮಾರು ಮೂರು ತಿಂಗಳು ಮೇಳ ಮಾಡಿಸಿ ಎಲ್ಲರೂ ಸಂಪೂರ್ಣವಾಗಿ ತಯಾರಿ ಆದ ಮೇಲೆ ಚಿತ್ರೀಕರಣಕ್ಕೆ ಹೋದೆ. ಚಿತ್ರೀಕರಣದ ಸಂದರ್ಭದಲ್ಲೆ ಹಲವಾರು ಸಾರಿ ಹೇಳಿದ್ದೆ, ಈ ಸಿನಿಮಾ ಖಂಡಿತ ಅವಾರ್ಡ್ ಪಡೆದು ಕೊಳ್ಳುತ್ತೆ ಎಂದು. ಎಲ್ಲರೂ ಹೊಸಕಲಾವಿದರೆ ಆಗಿದ್ದರಿಂದ ನಾನು ಎರಡು ಸಿನಿಮಾ ಅದಾಗಲೇ ಮಾಡಿದ್ದರಿಂದ ಏನೋ ಹೇಳುತ್ತಿದ್ದಾನೆ ಎಂದು ಅಂದುಕೊಂಡಿದ್ದರೋ ಏನೊ. ಆದರೆ ನನ್ನ ಊಹೆಯಂತೆ 2021ನೇ ಸಾಲಿನ ಬೆಂಗಳೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಮೊದಲ ಅತ್ಯುತ್ತಮ ಸಿನಿಮಾವಾಗಿ ಹೊರ ಹೊಮ್ಮಿ ರಾಜ್ಯಪಾಲರಿಂದ ಪ್ರಶಸ್ತಿ ಪಡೆಯುವಂತಾಯ್ತು.
ಇಂದು ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ರಾಜ್ಯ ಪ್ರಶಸ್ತಿಯಲ್ಲು ಮೊದಲ ಅತ್ಯುತ್ತಮ ಸಿನಿಮಾದ ಜೊತೆಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿರೋದು ನಾನು ಸಿನಿಮಾ ಕ್ಷೇತ್ರಕ್ಕೆ ಬಂದದಕ್ಕೂ ಸಾರ್ಥಕ ಎಂಬ ಮನೋಭಾವನೆ ಆಗಿದೆ.