ಚಿತ್ರ: ಬಿಳಿಚುಕ್ಕಿ ಹಳ್ಳಿಹಕ್ಕಿ
ನಿರ್ದೇಶನ : ಮಹೇಶ್ ಗೌಡ
ತಾರಾಗಣ: ಮಹೇಶ್ ಗೌಡ, ಕಾಜಲ್ ಕುಂದರ್, ಲಕ್ಷ್ಮಿ ಸಿದ್ದಯ್ಯ, ರವಿ ಭಟ್, ವೀಣಾ ಸುಂದರ್, ಜಹಂಗೀರ್ ಮತ್ತಿತರರು
ರೇಟಿಂಗ್: * 3.5/5 ****
ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಕಥೆಯ ಚಿತ್ರಗಳು ತೆರೆಗೆ ಬರುತ್ತಿವೆ, ಅವುಗಳು ಗಮನ ಸೆಳೆಯುತ್ತಿವೆಯೂ ಕೂಡ ಅಂತಹ ಚಿತ್ರಗಳ ಸಾಲಿಗೆ ನಿಲ್ಲಬಹುದಾದ ಸಾಮಾಜಿಕ ಕಳಕಳಿಯ ಚಿತ್ರ “ ಬಿಳಿಚುಕ್ಕಿ ಹಳ್ಳಿಹಕ್ಕಿ”.
 
ತೊನ್ನಿನ ಸಮಸ್ಯೆ ಕುರಿತು ಜಾಗೃತಿ ಮೂಡಿಸುವ ಚಿತ್ರ ಇದು, ಕನ್ನಡದಲ್ಲಿ ತೊನ್ನು ಸಮಸ್ಯೆ ಆಧರಿಸಿ ಸ್ವತಃ ತೊನ್ನು ಸಮಸ್ಯೆಯಿಂದ ಬಳಲುತ್ತಿರುವ ಮಹೇಶ್ ಗೌಡ ನಟಿಸಿ, ನಿರ್ದೇಶನ ಮಾಡಿರುವ  ಚಿತ್ರ ಇದು, ಹೀಗಾಗಿ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸತನದಿಂದ ಕೂಡಿದ ವಿಭಿನ್ನ ಕಥಾಹಂದರ ಚಿತ್ರ.
 
ನಿರ್ದೇಶಕ ಮಹೇಶ್ ಗೌಡ ಸಾಮಾಜಿಕ ಕಳಕಳಿ ಇರುವ ಮತ್ತು ತೊನ್ನಿನ ಬಗ್ಗೆ ಜಾಗೃತಿ ಮೂಡಿಸುವ “ಬಿಳಿ ಚುಕ್ಕಿ ಹಳ್ಳಿಹಕ್ಕಿ” ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ, ಆ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಸ್ವತಃ ತೊನ್ನಿನ ಸಮಸ್ಯೆಯಿಂದ ಬಳಲುತ್ತಿರುವ ನಾಯಕ, ನಿರ್ದೇಶಕ ಮಹೇಶ್ ಗೌಡ ಚಿತ್ರರಂಗದಲ್ಲಿ ಅಪರೂಪ ಎನ್ನುವ ಕಥಾ ವಸ್ತುವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ.
 
ಚಿತ್ರದಲ್ಲಿ ಅಮ್ಮ ಮಗನ ಪ್ರೀತಿ, ಮಮಕಾರವಿದೆ, ಜೊತೆಗೆ ತನ್ನ ಮಗ ಎಲ್ಲರಂತೆ ಇರಬೇಕು ಎನ್ನುವ ತಾಯಿಯ ಕಕ್ಕುಲಾತಿ, ಸೋದರ ಮಾವ- ಬಾಮೈನದ ಸ್ನೇಹ, ಪ್ರೀತಿಯೂ ಇದೆ,ಇನ್ನೊಂದೆಡೆ ಅಪ್ಪ- ಮಗಳ ಬಾಂಧವ್ಯ, ತನ್ನ ಮಗಳು ರೋಗಿಷ್ಠನ್ನು ಮದುವೆಯಾಗಿ ಸಮಸ್ಯೆ ಎದುರಿಸಿಯಾಳು ಎನ್ನುವ ಅತಿಯಾದ ಪ್ರೀತಿಯೂ ಇದೆ, ಜೊತೆಗೆ ತೊನ್ನು ರೋಗ ಅಂಟು ಸಮಸ್ಯೆಯಲ್ಲ, ಒಬ್ಬರಿಂದ ಮತ್ತೊಬ್ಬರಿಗೆ ಬರುವ ಕಾಯಿಲೆಯಲ್ಲ. ಈ ಬಗ್ಗೆ ಜನರಲ್ಲಿ ಗೊಂದಲ ಬೇಡ ಎನ್ನುವ ಅರಿವು ಮೂಡಿಸುವ ಉದ್ದೇಶವೂ ಇದೆ.
ಶಿವ (ಮಹೇಶ್ ಗೌಡ)ನಿಗೆ ಚಿಕ್ಕಂದಿನಿಂದಲೇ ಬಿಳಿಚುಕ್ಕಿ ತೊನ್ನು ಸಮಸ್ಯೆ ಇರುತ್ತದೆ, ಇದರಿಂದ ನೆರೆ ಹೊರೆಯವರಿಂದ ಸ್ನೇಹಿತರಿಂದ ಅವಮಾನಕ್ಕೆ ಒಳಗಾದವ, ಒಂದು ರೀತಿ ನೋವು ಅವಮಾನ ಆತನಿಗೆ ಮಾಮೂಲು, ಇದೇ ಕಾರಣಕ್ಕೂ ಯಾವ ಹುಡುಗಿಯೂ ಈತನ್ನು ಒಪ್ಪಿಕೊಂಡಿರುವುದಿಲ್ಲ. ವಯಸ್ಸು ಮೀರಿದೂ ಮದುವೆಯಾಗದ ಕವಿತಾ ( ಕಾಜಲ್ ಕುಂದರ್) ಬಂದ ಹುಡುಗರನ್ನೆಲ್ಲಾ ತಿರಸ್ಕರಿಸುತ್ತಾಳೆ, ತೊನ್ನು ಸಮಸ್ಯೆ ಇರುವ ಹುಡುಗ ನೋಡಲು ಬಂದಾಕ್ಷಣ ಹಿಂದೂ ಮುಂದು ನೋಡದೆ ಆತನನ್ನು ಮದುವೆಯಾಗಲು ಒಪ್ಪಿಕೊಂಡು ಬಿಡ್ತಾಳೆ.
 
ಇದು ಹುಡುಗಿಯ ಅಮ್ಮನಿಗೆ ಇಷ್ಟವಿಲ್ಲ, ಅಪ್ಪ ಮಗಳಿಗೆ ಬೆಂಬಲವಾಗಿ ನಿಲ್ತಾರೆ,ಹಾಗೋ ಹೀಗೋ ಶಿವ- ಕವಿತಾ ಮದುವೆ ಆಗುತ್ತೆ. ಎಲ್ಲವೂ ಸಲೀಲು ಎನ್ನುವಾಗ ಹುಡುಗಿನ ಅಮ್ಮ ಹೇಗಾದರೂ ಮಾಡಿ ಮದುವೆ ಮುರಿದು ಮಗಳಿಗೆ ಮತ್ತೊಂದು ಮದುವೆ ಮಾಡಬೇಕು ಕನವರಿಸುತ್ತಾಳೆ, , ಮುಂದೇನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು
ನಿರ್ದೇಶಕ ಮಹೇಶ್ ಗೌಡ, ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ, ನಟನಾಗಿಯೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೆಲವು ಸನ್ನಿವೇಶಗಳು ಮನಮಿಡಿಯುವಂತೆ ಮಾಡಿದೆ, ನಾಯಕಿ ಕಾಜಲ್ ಕುಂದರ್ ಸಹಜಾಭಿನಯದಿಂದ ಗಮನ ಸೆಳೆದಿದ್ಧಾರೆ.ಲಕ್ಷ್ಮಿ ಸಿದ್ದಯ್ಯ, ವೀಣಾ ಸುಂದರ್, ರವಿ ಭಟ್, ಜಹಂಗೀರ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. 
 
ನಿರ್ದೇಶಕ ಮಹೇಶ್ ಗೌಡ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲರ್ದದಲ್ಲಿ ಕೆಲವೊಂದು ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ ಇನ್ನಷ್ಟು ಉತ್ತಮ ಚಿತ್ರ ನೀಡಬಹುದಿತ್ತು. ಆಗಿ ಹೋಯ್ತು ಮುವ್ವತ್ತು ಹಾಡು ಗಮನ ಸೆಳೆಯುತ್ತದೆ.