ಚಿತ್ರ : ಗ್ರೀನ್
ನಿರ್ಮಾಣ : ವಿ. ಎನ್.ಸ್ವಾಮಿ,
 ರಾಜ್ ವಿಜಯ್
ನಿರ್ದೇಶನ :  ರಾಜ್ ವಿಜಯ್
ಛಾಯಾಗ್ರಹಣ : ಕೆ. ಮಧುಸೂದನ್
ಸಂಗೀತ :  ಶಕ್ತಿ ಸ್ಯಾಕ್
ಕಲಾವಿದರು : ಗೋಪಾಲ್‌ಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್, ಆರ್.ಜೆ.ವಿಕ್ಕಿ, ಗಿರೀಶ್ ಎಂ.ಎನ್., ವಿಶ್ವನಾಥ್ ಮಾಂಡಲೀಕ, ಶಿವ ಮಂಜು, ಡಿಂಪಿ ಪಾದ್ಯ ಹಾಗೂ ಇತರರು. 
ಮಾನವ ಯಾವತ್ತೂ ಸ್ವತಂತ್ರ ಜೀವಿಯಲ್ಲ. ಆತನನ್ನು ಯಾರೋ ಒಬ್ಬರು ಸದಾ ನಿಯಂತ್ರಿಸುತ್ತಲೇ ಇರುತ್ತಾರೆ. ಅದರಲ್ಲೂ ದುರ್ಬಲ ಮನಸಿನವರು ಆತನ ದಾಳವೇ ಆಗಿಬಿಡುತ್ತಾರೆ. ಅಂಥ ಮನಸ್ಥಿತಿಯ ಮಾಯಣ್ಣನ ಹೋರಾಟದ ಬದುಕನ್ನು ನಿರ್ದೇಶಕ ರಾಜ್ ವಿಜಯ್ ಅವರು ಗ್ರೀನ್ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ. ಮಾಯಣ್ಣ ತನ್ನ ಆಸೆ, ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಅದನ್ನೇ ನಿಜವೆಂಬ ಭ್ರಮೆಯಲ್ಲಿರುತ್ತಾನೆ,  ತನ್ನನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಆಚೆ ಬರಲು ಮಾಯಣ್ಣ ಸದಾ  ಹೋರಾಟ ನಡೆಸುತ್ತಲೇ ಇರುತ್ತಾನೆ.  ಚಿತ್ರದ ಇಡೀ ಕಥೆ  ನಡೆಯುವುದು ದಟ್ಟ ಹಾಗೂ ದುರ್ಗಮ ಕಾಡಿನ ನಡುವೆ, ಆ ಕಾಡಿನ ಒಳ ಹೋದವರು ಅಲ್ಲಿಂದ ಹೊರಬರೋದು  ಅಸಾಧ್ಯ. ಅಂಥ ಕಾಡಲ್ಲಿ  ತನ್ನದೇ ಆದ  ಬದುಕನ್ನು ಕಟ್ಟಿಕೊಂಡಿದ್ದ ಮಾಯಣ್ಣ, ಚಿಕ್ಕ ವಯಸಿನಲ್ಲೇ  ಅಗಲಿದ ತನ್ನ ತಾಯಿ ಸಾವಿತ್ರಿಯ ನೆನಪಲ್ಲೇ ಜೀವನ ಸಾಗಿಸುತ್ತಿರುತ್ತಾನೆ,  ಮನೆಯಿಂದ ಹೊರಗೆ ಹೋದರೆ ಅಲ್ಲೊಬ್ಬ ಬ್ರಹ್ಮ ರಾಕ್ಷಸ ಇದ್ದಾನೆ ಅಂತ ಭಾವಿಸಿರುತ್ತಾನೆ, ತಾಯಿಯ ಮಡಿಲಲ್ಲಿ ಮಲಗಿದಾಗ ಆಕೆ ಹೇಳುವ  ಹಿತನುಡಿಗಳು ಆತನಿಗೆ ವೇದವಾಕ್ಯ, ಆಕೆಯ ನೆನಪಲ್ಲೇ ಆತನ  ಬದುಕು,  ಭಯ ಆವರಿಸಿದಾಗ ಆತ ಹೋಗುವುದು ಸೀದಾ ಬುಡ್ಡಯ್ಯನ ನೀರಾ ಅಂಗಡಿಗೆ, ಅಲ್ಲಿ ಬುಡ್ಡಯ್ಯ ಕೊಡೋ ನೀರಾ ಕುಡಿದು, ಆತನ  ಮಾತುಗಳನ್ನು ಕೇಳಿದಾಗ  ಮಾಯಣ್ಣನಿಗೆ  ಧೈರ್ಯ ಬರುತ್ತೆ.
 
 ಹೀಗೆ ಸಾಗುವ ಕಥೆಯಲ್ಲಿ  ಕುತೂಹಲಕಾರಿ ತಿರುವೊಂದಿದೆ. ಅದೇನೆಂದು  ನೀವು ಚಿತ್ರ ವೀಕ್ಷಿಸಿದಾಗಲೇ ತಿಳಿಯುತ್ತೆ. ಗೋಪಾಲಕೃಷ್ಣ ದೇಶಪಾಂಡೆ ಮಾಯಣ್ಣನ ಪಾತ್ರದಲ್ಲಿ ಜೀವಿಸಿದ್ದಾರೆಂದೇ ಹೇಳಬಹುದು. ಆರ್.ಜೆ. ವಿಕ್ಕಿ ಅವರ ಪಾತ್ರವೂ ಕುತೂಹಲಕಾರಿಯಾಗಿದೆ, ನಿರ್ದೇಶಕರು ಇಂಥ ಘಟನೆ ನಡೆದಿರುವುದಕ್ಕೆ ಚಿತ್ರದ ಕೊನೆಯಲ್ಲಿ ನಿದರ್ಶನಗಳನ್ನೂ ನೀಡಿದ್ದಾರೆ, ನಿಗೂಢ ಪ್ರಪಂಚದಿಂದ ಹೊರಬರಲು ನಡೆಸುವ ಹೋರಾಟ, ತನ್ನೊಳಗೆ ತಾನು ಕಳೆದುಹೋದಂಥ ಅನುಭವ, ಆತನೇ ಸೃಷ್ಠಿಸಿಕೊಂಡ ಪಾತ್ರಗಳ ಭ್ರಮೆಯಲ್ಲಿ ರಾಕ್ಷಸನಿಂದ ದೂರವಿರಬೇಕಾದವನು ಕೊನೆಗೆ ತಾನೇ ರಾಕ್ಷಸನಂತಾದ ಮಾಯಣ್ಣನ ಬದುಕನ್ನು ಹೇಳುವುದೇ ಗ್ರೀನ್ ಚಿತ್ರದ ಕಥಾಹಂದರ.  ಬೆಸ್ಟ್ ಇಂಡಿಯನ್ ಫಿಲಂ, ಬೆಸ್ಟ್ ಥ್ರಿಲ್ಲರ್ ಫಿಲಂ, ಬೆಸ್ಟ್ ಸೈಕಲಾಜಿಕಲ್ ಚಿತ್ರ ಹೀಗೆ  19ಕ್ಕೂ ಹೆಚ್ಚು  ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ ಗ್ರೀನ್ ವೀಕ್ಷಕರನ್ನು ಕಾಡುವ ಚಿತ್ರ.  ಗುಣಾಧ್ಯ ಪ್ರೊಡಕ್ಷನ್ಸ್ ಮೂಲಕ ಈ  ಚಿತ್ರವನ್ನು ಬಿ.ಎನ್.ಸ್ವಾಮಿ ಹಾಗೂ ರಾಜ್‌ವಿಜಯ್ ನಿರ್ಮಿಸಿದ್ದು, ರಾಜ್ ವಿಜಯ್ ಅವರೇ  ಕಥೆ, ಚಿತ್ರಕಥೆ  ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ, ಈ ಚಿತ್ರದಲ್ಲಿ  ಕ್ಯಾಮೆರಾವರ್ಕ್ ಅದ್ಭುತವಾಗಿದೆ.  ಕೆ.ಮಧುಸೂಧನ್ ಅವರು ತಮ್ಮ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ.  ಜತೆಗೆ  ಶಕ್ತಿ ಸ್ಯಾಕ್ ಅವರ ಸಂಗೀತ ಸಂಯೋಜನೆ ಚಿತ್ರದ ಓಟಕ್ಕೆ  ಸಾಥ್ ನೀಡಿದೆ.