ದಿಲ್ಮಾರ್ ಅಪರೂಪದ ಪ್ರೇಮಕಥೆ,  ದಿಲ್ ಅಂದ್ರೆ ಹೃದಯ, ಮಾರ್ ಅಂದರೆ ಸಾಹಸ,  ನಾಯಕ  ಶುಕ್ಲ (ರಾಮ್) ಒಬ್ಬ ಸೈಕೋ ಮನಸ್ಥಿತಿಯ ವ್ಯಕ್ತಿ. ಆತನ ಜೀವನದಲ್ಲಿ ಎಂಟ್ರಿಯಾಗುವ  ಯುವತಿಯರಿಬ್ಬರ  ಪ್ರೀತಿ, ಪ್ರೇಮದ  ಕಥೆಯನ್ನು ಎಳೆಯಾಗಿಟ್ಟುಕೊಂಡು ಹೆಣೆದಿರುವ ಚಿತ್ರಕಥೆಯೇ ದಿಲ್ಮಾರ್.  ಇದರೊಂದಿಗೆ ಒಂದಷ್ಟು  ಸಸ್ಪೆನ್ಸ್, ಥ್ರಿಲ್ಕರ್ ಕೂಡ ಇದೆ.  ಕಥೆಯ ಮೊದಲ ಭಾಗದಲ್ಲಿ ಬರುವ ನಾಯಕಿ ಅಕ್ಷತಾ (ಆದಿತಿ ಪ್ರಭುದೇವ) ತನ್ನ ಗೆಳೆಯನನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿ, ಮನೆಯಲ್ಲಿ ಎಲ್ಲರನ್ನೂ ಒಪ್ಪಿಸುತ್ತಾಳೆ, ಆ ಮದುವೆ ನಡೆಯೋ ಟೈಮಲ್ಲಿ ಚಿತ್ರಕಥೆ  ಬೇರೆಯದೇ  ತಿರುವು ತೆಗೆದುಕೊಳ್ಳುತ್ತದೆ,  ಆಕೆಯ  ಜೀವನದಲ್ಲಿ ಸೈಕೋ ಶುಕ್ಲನ ಎಂಟ್ರಿಯಾಗಿ ಮುಂದೆ ಅವಳನ್ನೇ ಪ್ರೀತಿಸುತ್ತಾನೆ. ಈನಡುವೆ ಅವಳಿಗೂ ಅವನಮೇಲೆ  ಪ್ರೀತಿ ಉಂಟಾಗಿ  ಹೃದಯ ಮಿಡಿಯುತ್ತದೆ,  ಮದುವೆ ನಡೆಯುವ ಸಂದರ್ಭದಲ್ಲಿ ಅಕ್ಷತಾ ಕಾಣೆಯಾಗುತ್ತಾಳೆ. ಆದರೆ ಆ ಅಪವಾದ ಶುಕ್ಲನ  ಮೆಲೆ ಬರುತ್ತದೆ. 
 
ಆದರೆ ಅದಕ್ಕೆ ಕಾರಣ ಅಕ್ಷತಾಳ ಮಾವ. ಅಕ್ಷತಾ ಅಲ್ಲಿಂದ ತಪ್ಪಿಸಿಕೊಂಡು ಬಂದಾಗ  ಮುಂದೆ ತೆರೆದುಕೊಳ್ಳುವುದೇ ಶುಕ್ಲನ ಜೀವನದಲ್ಲಿ  ನಡೆದ ಹಿಂದಿನ ಘಟನೆ, ಆತ ಒಬ್ಬ ಸೈಕೊ, ಅವನದು ವಿಚಿತ್ರ ಸ್ವಭಾವ, ಬುದ್ದಿ ಮಾತನ್ನು ಕೇಳಬಾರದು, ಆದರೆ ಮನಸ್ಸಿನ ಮಾತನ್ನು ಕೇಳಬೇಕೆಂಬಂತೆ  ವರ್ತಿಸುವ  ಸಮಯದಲ್ಲಿ ಆಶ್ಚರ್ಯವೆಂಬಂತೆ ನಾಯಕಿಯ ಎಂಟ್ರಿ,  ಕುಡಿತದ ಅಮಲಿನಲ್ಲಿದ್ದ  ನಾಯಕಿ ಶುಕ್ಲನನ್ನು ನೋಡಿ ಐ ಲವ್ ಯು ಎನ್ನುತ್ತಾಳೆ.  ಮುಂದೆ  ನಡೆಯುವ ಕಥೆಯಲ್ಲಿ  ಇದಕ್ಕೆ  ಕಾರಣ ರಿವೀಲ್ ಆಗುತ್ತದೆ,  ಆಕೆ ಒಬ್ಬ  ನಟಿಯಾಗಬೇಕೆಂದು ಹೋದಾಗ ಅನಾಥೆಯಾದ ಅವಳಿಗೆ ಆಸರೆಯಾಗುವಂತೆ ಬಂದ ವಿಲನ್  ಸಾಯಿಕುಮಾರ್ ಆಕೆಯ ಅಸಹಾಯಕತೆಯನ್ನು ಉಪಯೊಗಿಸಿಕೊಂಡು ಅವಳನ್ನು ವೇಶ್ಯಾಗೃಹಕ್ಕೆ ಕರೆತರುತ್ತಾನೆ, ಅಲ್ಲಿ ಪೋಲಿಸರ ರೈಡ್ ಆದಾಗ ನಾಯಕಿ ಅಲ್ಲಿಂದ ತಪ್ಪಿಸಿಕೊಂಡು ಬರುತ್ತಾಳೆ,  ಆಕೆಗೆ ಶುಕ್ಲ ಸಹಾಯ ಮಾಡುತ್ತಾನೆ. ನಂತರ ಶುಕ್ಲ  ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ಕೊಡುವ ಗೌರವ, ಪ್ರಾಮಾಣಿಕತೆಗೆ  ಮನಸೊತು ಆತನಲ್ಲಿ  ಪ್ರೀತಿಯ ಕೋರಿಕೆ ಇಡುತ್ತಾಳೆ. 
 
ಆಕೆಯ ಪ್ರೀತಿಯನ್ನು ಶುಕ್ಲ ತಿರಸ್ಕರಿಸುತ್ತಾನೆ.  ಆಕೆ ಅದೇ ಕೊರಗಿನಲ್ಲಿರುವಾಗ ಆತನ ಕಣ್ಣಮುಂದೆ ಅಪಘಾತಕ್ಕೊಳಗಾಗಿ  ಮರಣ ಹೊಂದುತ್ತಾಳೆ, ಅಪಘಾತದಲ್ಲಿ ಸತ್ತ ನಾಯಕಿಯ ಹೃದಯವನ್ನು ಅಕ್ಷತಾಗೆ ಹಾಕಿದ್ದರಿಂದ ಆ ಹೃದಯ ಹುಡುಕುತ್ತ ಹೊರಟವನಿಗೆ ಅಕ್ಷತಾಳ ಹೃದಯದ ಸೆಳೆತವಾಗುತ್ತದೆ,  ಮುಂದೆ ನಡೆಯುವ ಘಟನೆಗಳು ಕುತೂಹಲಕಾರಿಯಾಗಿದ್ದು,  ನೋಡುಗರನ್ನು  ಸೆಳೆಯುತ್ತವೆ. ನಾಯಕ ಶುಕ್ಲನ ಪಾತ್ರದಲ್ಲಿ  ನಟ ರಾಮ್ ಜೀವಿಸಿದ್ದಾರೆ, ಇನ್ನು ಅಕ್ಷತಾ ಪಾತ್ರದಲ್ಲಿ  ಅದಿತಿ ಪ್ರಭುದೇವ ಉತ್ತಮ ಅಭಿನಯ ನೀಡಿದ್ದಾರೆ,  ಹಿರಿಯನಟ  ಸಾಯಿಕುಮಾರ್ ಅವರು  ವಿಲನ್  ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ,  ಈ  ಚಿತ್ರದಲ್ಲಿ  ಸಂಭಾಷಣೆಗಳೇ ಹೈಲೈಟ್ ಎನ್ನಬಹುದು, ದಿಲ್ಮಾರ್  ಒಂದು ಉತ್ತಮ ಪ್ರಯತ್ನದ ಚಿತ್ರವಾಗಿದ್ದು  ಪ್ರೇಕ್ಷಕರನ್ನು ಸೆಳೆಯುವಂಥ ಎಲ್ಲ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡಿದೆ.