ಚಿತ್ರ : ನ್ಯೂಟನ್ ಥರ್ಡ್ ಲಾ
ನಿರ್ದೇಶನ : ಸುಧಾಕರ ರೆಡ್ಡಿ
ನಿರ್ಮಾಣ : ವಿಶ್ವನಾಥ್ ಮುನಿನಗರ್ , ಸಿದ್ದಲಿಂಗಯ್ಯ
ಸಂಗೀತ : ಗಂಧರ್ವ,
ಛಾಯಾಗ್ರಹಣ : ಪ್ರವೀಣ್ ಕುಮಾರ್
ತಾರಾಗಣ : ವಿಶೂ, ವಿದ್ಯಾಶ್ರೀ ಗೌಡ, ವಿಜಯ್ ಚೆಂಡೂರ್, ಅಂಬರೀಷ ಸಾರಗಿ, ಶ್ರೀಧರ್‌ಭಟ್, ಅಥರ್ವ, ರೋಹಿತ್, ಸಾವಂತ್ ಕಲ್ಬುರ್ಗಿ, ಮೀನಾಕ್ಷಿ ಅತ್ರಿ, ಶ್ವೇತಾ, ಗಂಧರ್ವ, ಮಹೇಶ್‌ಬಾಬು ಹಾಗೂ ಇತರರು...
ಈ ಸಿನಿಮಾಗೂ ನ್ಯೂಟನ್‌ನ ಮೂರನೇ ನಿಯಮಕ್ಕೂ ಏನು ಸಂಬಂಧ ಅಂತ ಅನಿಸೋದು ಸಹಜ. ಅದಕ್ಕೆ ಉತ್ತರ ಬೇಕೆಂದರೆ ನ್ಯೂಟನ್ ಥರ್ಡ್ ಲಾ ಚಿತ್ರವನ್ನೊಮ್ಮೆ ನೋಡಿಕೊಂಡು ಬನ್ನಿ.
"ಕ್ರಿಯೆಗೆ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದೇ ಕಂಟೆಂಟ್ ಆಧರಿಸಿ ಈ ಚಿತ್ರವಾಗಿದೆ. ಒಂದಷ್ಟು ಗೆಳೆಯರು ಹೋಂ ಸ್ಟೇಗೆ ಹೋದಾಗ ಅಲ್ಲಿ ನಡೆಯೋ ಕಾಣದ ಮುಖಗಳ ಕೈವಾಡಕ್ಕೆ ಸಿಕ್ಕು ಪರದಾಡುವವರ ಸುತ್ತ ಬಲನಡೆಯೋ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟ್ರಿಯನ್ನು ನಿರ್ದೇಶಕ ಸುಧಾಕರ ರೆಡ್ಡಿ ಅವರು ಅಷ್ಟೇ ಕುತೂಹಲಕರವಾಗಿ ನಿರೂಪಿಸುವ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಾರೆ.
ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಆದಿ (ವಿಶೂ) , ಆರಾಧ್ಯ (ವಿದ್ಯಾಶ್ರೀ ಗೌಡ) ಹಾಗೂ ಗೆಳೆಯರಾದ ತೇಜು , ಲಾಸ್ಯ , ವರುಣ್ ಬಿಡುವಿನ ಸಮಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ದೃಶ್ಯಗಳನ್ನು ತಾವೇ ಚಿತ್ರೀಕರಿಸಿ ಪೋಸ್ಟ್ ಮಾಡುವುದು ಮಾಡಿಕೊಂಡಿರುತ್ತಾರೆ. ಇವರ ಮತ್ತೊಬ್ಬ ಗೆಳೆಯ ಮೆಕ್ಯಾನಿಕ್ ಪಿಂಗಾಣಿ (ವಿಜಯ್ ಚಂಡೂರ್) ಕೂಡ ಇವರಿಗೆ ಸಾಥ್ ನೀಡುತ್ತಾನೆ. ಒಮ್ಮೆ ಆದಿ ತನ್ನ ಗೆಳತಿ ಆರಾಧ್ಯಳ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಸೆಲಬ್ರೇಷನ್ ಕೊಡೋ ಜೊತೆಗೆ ತನ್ನ ಪ್ರೀತಿಯ ವಿಚಾರವನ್ನೂ ಸಹ ಹೇಳಲು ನಿರ್ಧರಿಸುತ್ತಾನೆ. ಇದಕ್ಕಾಗಿ ಮಡಿಕೇರಿಗೆ ಒಂದು ಟ್ರಿಪ್ ಪ್ಲಾನ್ ಮಾಡಿ ಗೆಳೆಯರ ಜತೆ ಹೊರಡಲು ನಿರ್ಧರಿಸುತ್ತಾರೆ. ಆ ಪಯಣದಲ್ಲಿ ಗೆಳೆಯರ ನಡುವೆ ತುಂಟಾಟ, ತರಲೆ, ಜಾಗೃತಿ ಮೂಡಿಸುವ ದೃಶ್ಯಗಳ ಚಿತ್ರೀಕರಣ. ನಂತರ ದಟ್ಟವಾದ ಅರಣ್ಯದಲ್ಲಿ ಕಿಡ್ನ್ಯಾಪರ್ ಗಳ ಕೈಗೆ ಸಿಕ್ಕಿಹಾಕಿಕೊಳ್ಳುವ ಆ ಗೆಳೆಯರಿಗೆ ಪಿಎಸ್ಐ ಎಕ್ಸಾಮ್ ವಂಚಿತರ ವೇದನೆಯ ಸತ್ಯ ತಿಳಿಯುತ್ತದೆ. ಇವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಆ ಗೆಳೆಯರು ವಾಸುದೇವ್ ಎಂಬುವರ ಹೋಂ ಸ್ಟೇನಲ್ಲಿ ಉಳಿದುಕೊಳ್ಳುತ್ತಾರೆ. ಮಾಲೀಕರ ನಡೆ-ನುಡಿ ಗಮನಿಸುವ ಗೆಳೆಯರು ಯಾವುದೇ ತೊಂದರೆ ಮಾಡಿಕೊಳ್ಳದೆ ಅಚ್ಚುಕಟ್ಟಾಗಿ ಪಾರ್ಟಿ ಮಾಡಿಕೊಂಡು ಹೊರಡಲು ತೀರ್ಮಾನಿಸುತ್ತಾರೆ. ಆ ರಾತ್ರಿ ಆರಾಧ್ಯಳ ಬರ್ತಡೇ ಪಾರ್ಟಿಯಲ್ಲಿ ಎದುರಾಗುವ ಎಡವಟ್ಟು ಆದಿಯ ಮನಸ್ಸಿಗೆ ನೋವಾಗುತ್ತದೆ. ಈ ನಡುವೆ ಬೇಸರದಿಂದಲೇ ಕುಡಿದ ನಿಶೆಯಲ್ಲಿದ್ದ ಪಿಂಗಾಣಿ ಹಾಗೂ ಅರುಣ್ ಹುಡುಗಿಯರ ಬಗ್ಗೆ ಕೆಲಸಗಾರನ ಬಳಿ ಕೇಳುತ್ತಾರೆ. ಇದರಿಂದ ಕೋಪಗೊಂಡ ಗೆಳತಿಯರು ತಮ್ಮ ತಮ್ಮ ರೂಮ್ ಸೇರುತ್ತಾರೆ. ಬೆಳಗ್ಗೆ ಎದ್ದು ನೋಡಿದಾಗ ಗೆಳೆಯರ ರೂಮಲ್ಲಿ ಹುಡುಗಿಯೊಬ್ಬಳನ್ನು ನೋಡುತ್ತಾರೆ. ಕಾಣುತ್ತಾಳೆ, ಆಕೆ ಯಾರು ಎಂಬ ಪ್ರಶ್ನೆ ಏಳುವಾಗಲೇ ಆಕೆ ಸತ್ತಿರುತ್ತಾಳೆ. ಇದರಿಂದ ಗಾಬರಿಗೊಂಡ ಮನೆ ಮಾಲೀಕ ನೀವು ಆಕೆಯ ರೇಪ್ ಮಾಡಿ ಮರ್ಡರ್ ಮಾಡಿದಿರಾ ಎಂದು ಪೋಲಿಸರಿಗೆ ಕಂಪ್ಲೇಂಟ್ ಕೊಡಲು ನಿರ್ಧರಿಸುತ್ತಾನೆ, ಗೆಳೆಯರ ಪರದಾಟ ನೋಡಿ ಲಾಯರ್ ಮೂಲಕ 25 ಲಕ್ಷ ಲಂಚ ಕೊಟ್ಟು ಕೇಸ್ ಮುಚ್ಚಿಸುವ ಪ್ಲಾನ್ ಆತನೇ ಮಾಡುತ್ತಾನೆ ಆ ಸ್ನೇಹಿತರು ಐದೈದು ಲಕ್ಷ ಹೊಂದಿಸಲು ಮುಂದಾದಾಗ ಒಂದು ನಿಗೂಢ ಸತ್ಯ ಹೊರಬರುತ್ತದೆ. ಅದು ಏನು.. ಹೇಗೆ.. ಎಂದು ಹುಡುಕುತ್ತ ಹೋದಂತೆ ಅದ ಹಿಂದಿರುವ ಕರಾಳ ಮುಖ, ಸಾವಿನ ರಹಸ್ಯದ ಜೊತೆ ಕುತೂಹಲಕಾರಿ ಅಂಶ ಕಂಡುಬರುತ್ತದೆ. ಅದೇನು ಎಂದು ಕ್ಲೈಮ್ಯಾಕ್ಸ್ ನಲ್ಲಿ ರಿವೀಲ್ ಆಗುತ್ತದೆ. ಮೋಜು , ಮಸ್ತಿಗೆಂದು ಹೋಂ ಸ್ಟೇಗಳಿಗೆ ಹೋಗುವವರು ಎಷ್ಟು ಜಾಗೃತಿಯಿಂದ ಇರಬೇಕು, ಅಲ್ಲಿ ಏನೆಲ್ಲಾ ನಡೆಯಬಹುದು ಎಂಬುದನ್ನು ನೈಜಕ್ಕೆ ಹತ್ತಿರವಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಗೆಳೆತನ , ಪ್ರೀತಿ, ಕಷ್ಟದ ಬದುಕಿನ ನಡುವೆ ಸಂತೋಷಪಡುವ ಗೆಳೆಯರ ಜೀವನದಲ್ಲಿ ಎದುರಾಗುವ ಸಂಕಷ್ಟ , ಹೇಗೆಲ್ಲಾ ಆಟ ಆಡಿಸುತ್ತದೆ ಎಂಬುದರ ಜೊತೆಗೆ ರೋಚಕ ತಿರುವನ್ನ ನೀಡಿದ್ದಾರೆ. ಛಾಯಾಗ್ರಹಣ , ಸಂಗೀತ ಗಮನ ಸೆಳೆಯುತ್ತದೆ. ಇದರಲ್ಲಿರುವ ಬಹಳಷ್ಟು ಯುವ ಪ್ರತಿಭೆಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಪಟ್ಟಿದ್ದಾರೆ. ಇಡೀ ಚಿತ್ರದ ಕೇಂದ್ರ ಬಿಂದುವಾದ ಹಾಸ್ಯನಟ ವಿಜಯ್ ಚಂಡೂರ್ ತಮ್ಮ ಮಾತಿನ ವರಸೆಯ ಮೂಲಕವೇ ನಗೆಯ ಝಲಕ್ ನೀಡುತ್ತಾರೆ. ಸಸ್ಪೆನ್ಸ್ , ಮರ್ಡರ್ ಮಿಸ್ಟ್ರಿ ಇಷ್ಟಪಡುವವರಿಗೆ ಈ ಚಿತ್ರ ತುಂಬಾ ಆಪ್ವಾಗುತ್ತದೆ. ಎಲ್ಲರೂ ಒಮ್ಮೆ ನೋಡಲು ಅಡ್ಡಿಯೇನಿಲ್ಲ.