ಒಂದು ಹಳ್ಳಿಯಲ್ಲಿ ಜನ, ಪೊಲೀಸ್ ಹಾಗೂ ನಕ್ಸಲರ ಮಧ್ಯೆ ನಡೆಯುವ ಸಂಘರ್ಷದ ಕಥೆಯನ್ನು ಆಪರೇಷನ್ ಲಂಡನ್ ಕೆಫೆ ಚಿತ್ರದ ಮೂಲಕ ಹೇಳೋ ಪ್ರಯತ್ನವನ್ನು ನಿರ್ದೇಶಕ ಸಡಗರ ರಾಘವೇಂದ್ರ ಮಾಡಿದ್ದಾರೆ. ಅಲ್ಲಿನ ಗ್ರಾಮಸ್ಥರು ನಕ್ಸಲರ ಕಥೆಯಿದು. ಮಲೆನಾಡಿನ ಚಿಕ್ಕಮಗಳೂರು, ಮಂಗಳೂರು ಹೀಗೆ ಕಾಡಂಚಿನ ಪ್ರದೇಶಗಳಲ್ಲಿ ಈ ಹಿಂದೆ ಕಾಣಿಸಿಕೊಂಡ ನಕ್ಸಲ್ ಇತಿಹಾಸದ ಒಂದಷ್ಟು ವಿಚಾರಗಳೊಂದಿಗೆ ಈ ಚಿತಚರ ತೆರೆದುಕೊಳ್ಳುತ್ತದೆ. ಛತ್ತಿಸ್‌ಗಡದಲ್ಲಿ ನಕ್ಸಲ್ ಚಟುವಟಿಕೆಯನ್ನು ಬೇರುಸಹಿತ ನಿರ್ನಾಮಗೊಳಿಸಿದ ದಕ್ಷ ಮಿಲಿಟರಿ ಪೊಲೀಸ್ ಅಧಿಕಾರಿಯನ್ನು ಹಳ್ಳಿಯ ಸುತ್ತ ಆವರಿಸಿಕೊಂಡ ನಕ್ಸಲರನ್ನು ನಿಗ್ರಹಿಸಲು ಗೃಹ ಇಲಾಖೆ ಕರೆಸುತ್ತದೆ.
ಆ ಗ್ರಾಮದ ಯುವತಿಯನ್ನು ತಹಸೀಲ್ದಾರ್ ತನ್ನ ಕಾಮದಾಹಕ್ಕೆ ಬಳಸಿಕೊಂಡು ಆಕೆಯ ಮಾನ ಹರಣ ಮಾಡಿರುತ್ತಾನೆ, ಪೊಲೀಸ್ ಕಡೆಯಿಂದಲೂ ಮಾನಸಿಕವಾಗಿ ಹಿಂಸೆ ಅನುಭವಿಸಿದ ಆಕೆ ಕೊನೆಗೆ ತನ್ನ ತಂದೆ, ತಾಯಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ವೇಶ್ಯೆಯ ಪಟ್ಟ ಕಟ್ಟಿಕೊಂಡು ತಾನಿನ್ನು ಬದುಕುವುದೇ ಅಸಾಧ್ಯವೆಂದುಕೊಂಡ ಸಮಯದಲ್ಲಿ ಆಕೆಗೆ ಧೈರ್ಯ ತುಂಬಿದವರೇ ಈ ನಕ್ಸಲರು, ಆಕೆಯನ್ನು ತಮ್ಮ ಸದಸ್ಯೆಯನ್ನಾಗಿ ಮಾಡಿಕೊಂಡು ತನ್ನನ್ನು ಹಾಳುಮಾಡಿದ ತಹಸೀಲ್ದಾರ್‌ನನ್ನು ಆಕೆಯಿಂದಲೇ ಕೊಲ್ಲಿಸುತ್ತಾರೆ, ಈ ಪ್ರಕರಣ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಸಂಚಲನ ಉಂಟು ಮಾಡುತ್ತದೆ. ನಕ್ಸಲರ ನಾಯಕನನ್ನು ಹಿಡಿಯಲು ವಾರೆಂಟ್ ಹೊರಡಿಸುತ್ತಾರೆ. ಆದರೆ ನಕ್ಸಲರಿಗೆ ಹೆದರಿದ ಆ ಹಳ್ಳಿಯ ಜನ ಯಾವುದೇ ಮಾಹಿತಿ ಕೊಡಲು ಹೆದರುತ್ತಾರೆ.
ಈ ನಡುವೆ ಹಳ್ಳಿಯಲ್ಲಿ ಕಾಲೇಜು ಓದುತ್ತಿದ್ದ ಹುಡುಗಿ(ಮೇಘಾ,ಶೆಟ್ಟಿ)ಗೆ ಆಗಾಗ ಅಲ್ಲದೆಗೆ ಬರುತ್ತಿದ್ದ ನಕ್ಸಲ್ ನಾಯಕನ ಮೇಲೆ ಪ್ರೀತಿಯಾಗುತ್ತದೆ. ಸಂಕಷ್ಟ ಎದುರಾದಾಗೆಲ್ಲ ಆಕೆ ಆತನನ್ನು ಸೇಫ್ ಮಾಡುವುದು, ಆತನೂ ಆಕೆಯನ್ನು ರಕ್ಷಿಸುವುದು ನಡೆಯುತ್ತಿರುತ್ತದೆ. ಇದು ಪ್ರೀತಿಯ ಹಾದಿ ಎಂದು ತಿಳಿದಾಗ ನಕ್ಸಲರ ತಂಡ ಆ ನಾಯಕನಿಗೆ ವಿರುದ್ಧವಾಗಿ ನಿಲ್ಲುತ್ತದೆ. ನಂತರ ಅವರ ತಂಡದೊಳಗೇ ಗಲಾಟೆ ಶುರುವಾಗುತ್ತದೆ. ಸರ್ಕಾರದ ವಿರುದ್ಧ ಹೋರಾಡಬೇಕಾದ ಅವರು ನಂಬಿದ ಸಿದ್ಧಾಂತದಂತೆ ತಪ್ಪಿತಸ್ಥರನ್ನು ಕೊಲ್ಲುವ ಬದಲು ಒಂದು ತಪ್ಪಿಗೆ ಮನೆಯವರನ್ನೆಲ್ಲ ಕೊಲ್ಲುವ ಹಂತಕ್ಕೆ ಬರುತ್ತದೆ. ಪ್ರೀತಿಗಾಗಿ ಯುದ್ಧಗಳೇ ಹೆಚ್ಚಾದಾಗ ಸಹಿಸಲು ಅಸಾಧ್ಯವಾಗುತ್ತದೆ. ಅಂತಿಮವಾಗಿ ನಕ್ಸಲರ ಉದ್ದೇಶವಾದರೂ ಏನಿತ್ತು?, ಆ ಹಳ್ಳಿ ಜನ ಸರ್ಕಾರದಿಂದ ಸಿಗುವ ಹಣದ ಆಸೆಗೆ ಏನು ಮಾಡಿದರು?, ಬಜಾರಿ ಹಳ್ಳಿ ಹುಡುಗಿಯ ಪ್ರೀತಿಯ ಕಥೆ ಏನಾಯ್ತು?. ಸಿದ್ಧಾಂತಕ್ಕೆ ಬದ್ದವಾಗಿದ್ದ ನಕ್ಸಲ್ ಹೋರಾಟಗಾರರು ಕಥೆ ಏನಾಯ್ತು ಈ ಎಲ್ಲ ಪ್ರಶ್ನೆಗಳಿಗೆ ಆಪರೇಷನ್ ಲಂಡನ್ ಕೆಫೆ ಚಿತ್ರದಲ್ಲಿ ಉತ್ತರವಿದೆ. ಸೀನ್ ಟು ಸೀನ್ ಆರಂಭದಿಂದ ಅಂತ್ಯದವರೆಗೂ ಕುತೂಹಲ ಬೆಳೆಸಿಕೊಂಡೇ ಸಾಗುವ ಈ ಚಿತ್ರದಲ್ಲಿ ಪ್ರೀತಿಯಿದೆ, ಕಣ್ಣೀರಿದೆ, ನೋವು, ನಲಿವಿದೆ, ಹತಾಶೆ ನಿರಾಸೆಗಳಿವೆ.
ಪಾಂಶು ಝಾ ಅವರ ಸಂಗೀತದ ಹಾಡುಗಳು ಕೇಳುವಂತಿವೆ, ಆರ್.ಡಿ.ನಾಗಾರ್ಜುನ್ ಅವರ ಕ್ಯಾಮೆರಾ ಕೈಚಳಕ ಚೆನ್ನಾಗಿದೆ, ವಿಕ್ರಂ ಮೋರ್, ಮಾಸ್ ಮಾದ ಮತ್ತು ಅರ್ಜುನ್ ರಾಜ್ ಅವರ ಆಕ್ಷನ್ ಚಿತ್ರದ ಹೈಲೈಟ್ ಎಂದೇ ಹೇಳಬಹುದು. ನಾಯಕನಾಗಿ ಕವೀಶ್ ಶೆಟ್ಟಿ ಉತ್ತಮ ಅಭಿನಯ ನೀಡಿದ್ದಾರೆ, ನಾಯಕಿ ಮೇಘಾ ಶೆಟ್ಟಿ ಬಜಾರಿ ಹುಡುಗಿಯಾಗಿ ಗಮನ ಸೆಳೆಯುತ್ತಾರೆ, ಮರಾಠಿ ಕಲಾವಿದರಾದ ಶಿವಾನಿ ಸುರ್ವೆ, ವಿರಾಟ್ ಮಡ್ಕ, ಪ್ರಸಾದ್ ಖಾಂಡೇಕರ್ ಚಾಲೆಂಜಿಂಗ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದು ಆಫ್ಟರ್ ಲಂಡನ್ ಕೆಫೆ ಕಥೆಯಾಗಿದ್ದು, ಲಂಡನ್ ಕೆಫೆಯಲ್ಲಿ ಏನಾಯ್ತು ಎನ್ನುವುದು ಮುಂದಿನ ಭಾಗದಲ್ಲಿ ಮೂಡಿಬರಲಿದೆ.