ಈಗಿನ ಸರ್ಕಾರಿ ಶಾಲೆಗಳ ಸ್ಥಿತಿ, ಆಗ ಮಕ್ಕಳ ಜತೆ ಶಿಕ್ಷಕರಿಗಿದ್ದ ಅನುಬಂಧ, ಜತೆಗೆ ಊರಿನ ಗ್ರಾಮಸ್ಥರ ಸಹಕಾರ ಇಂಥ ಅನೇಕ ವಿಚಾರಗಳನ್ನು ಹೇಳುವ ಚಿತ್ರ ಪಾಠಶಾಲಾ ಈ ವಾರ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದಿ ಮಲೆನಾಡಿನ ಒಂದು ಹಳ್ಳಿ. ಅಲ್ಲಿನ ಶಾಲೆಯಲ್ಲಿ ಮಕ್ಕಳ ದಾಖಲಾತಿಯೊಂದಿಗೆ ಚಿತ್ರ ಆರಂಭವಾಗುತ್ತದೆ. ರೈತನೊಬ್ಬ ಶಿಕಾರಿಗೆಂದು ಹೋದಾಗ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ನಾಳೆ ತನ್ನ ಕೋವಿಯನ್ನು ತಂದೊಪ್ಪಿಸುತ್ತೇನೆ ಎಂದು ಅರಣ್ಯಾಧಿಕಾರಿಗೆ ಹೇಳುತ್ತಾನೆ. ಆದರೆ ಮರುದಿನ ಕೋವಿಯನ್ನು ನೀಡದೆ ನಾಟಕವಾಡುತ್ತಾನೆ. ಇದರಿಂದ ಕೋಪಗೊಂಡ ಅರಣ್ಯಾಧಿಕಾರಿ ಅವನನ್ನು ಶಿಕಾರಿ ಮಾಡುತ್ತಿರುವಾಗಲೇ ಸಾಕ್ಷಿ ಸಮೇತ ಹಿಡಿಯಬೇಕೆಂದು ಕಾಯುತ್ತಿರುತ್ತಾನೆ. ಅಲ್ಲಿ ಕಾಡಿನ ಪ್ರಾಣಿಗಳ ಜತೆ ಗಂಧದ ಮರದ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿರುತ್ತೆ. ಹೀಗಿರುವಾಗ ಒಂದು ದಿನ ಮತ್ತೊಬ್ಬ ರೈತ ಶಿಕಾರಿಗೆ ಹೋಗಿ ಜಿಂಕೆಯೊಂದನ್ನು ಬೇಟೆಯಾಡಿ ಬರುತ್ತಿರುವಾಗ ಅರಣ್ಯಾಧಿಕಾರಿಯ ಕೈಗೆ ಸಿಕ್ಕಿಬಿಳುತ್ತಾನೆ. ಇದನ್ನೆ ಅಸ್ತ್ರ ಮಾಡಿಕೊಂಡ ಅರಣ್ಯಾಧಿಕಾರಿ ತನ್ನ ಸೇಡು ತಿರಿಸಿಕೊಳ್ಳುತ್ತಾನೆ. ಅವರು ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಾರೆ.
ಚಿತ್ರದ ಸೆಕೆಂಡ್ ಹಾಫ್ ನಲ್ಲಿ. ಅರಣ್ಯದ ಅಧಿಕಾರಿಗಳ ಮೋಸವನ್ನು ಅರಿತ ಮಕ್ಕಳು ಹಿರಿಯ ಅಧಿಕಾರಿಗಳಿಗೆ ನಡೆದಿರುವ ವಿಚಾರದ ಬಗ್ಗೆ ಪತ್ರ ಬರೆದು ವಿವರಿಸುತ್ತಾರೆ. ನಂತರ ಮಕ್ಕಳ ತಂದೆಯರೆಲ್ಲ ನಿರ್ದೋಷಿಗಳು ಎಂದು ಸಾಬೀತುಪಡಿಸಲು ಪತ್ತೆದಾರಿ ಕೆಲಸವನ್ನು ಮಾಡುತ್ತಾರೆ. ಆನಂತರ ಏನಾಯಿತು ಎಂಬುದನ್ನು ನೀವು ಚಿತ್ರಮಂದಿರದಲ್ಲೇ ನೋಡಬೇಕು.
ಪಾಠಶಾಲ ಚಿತ್ರದಲ್ಲಿ ನಿರ್ದೇಶಕ ಮಂಜುನಾಥ್ ಹೆದ್ದೂರು ಅವರು ಮಲೆನಾಡ ಸೊಬಗನ್ನು ಸುಂದರವಾಗಿ ಚಿತ್ರಣ ಮಾಡಿದ್ದಾರೆ. ಒಂದು ಅತ್ಯುತ್ತಮ ಕನ್ನಡ ಸಿನಿಮಾವಾಗಿ ಪಾಠಶಾಲಾ ಮೂಡಿ ಬಂದಿದೆ. ಈ ಚಿತ್ರಕ್ಕೆ ಓದು ಅಥವಾ ಓಡೋಗು ಎಂಬ ಅಡಿಬರಹವಿದ್ದು ಅರ್ಥಪೂರ್ಣವಾಗಿದೆ, ಅಲ್ಲದೆ ಆ ಪದಕ್ಕೆ ನಿರ್ದೇಶಕರು ಚಿತ್ರದಲ್ಲಿ ಉತ್ತರ ನೀಡಿದ್ದಾರೆ, ತುಂಬಾ ಅರ್ಥ ಪೂರ್ಣವಾದ ಅಡಿ ಬರಹದೊಂದಿಗೆ ತೆರೆಗೆ ಬಂದಿರುವ ಈ ಚಿತ್ರ ಸಮಾಜಕ್ಕೆ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಕುರಿತು, ಪರಿಸರ ಸಂರಕ್ಷಣೆ ಹಾಗೂ ೮೦, ೯೦ ರ ದಶಕದಲ್ಲಿದ್ದ ಶಿಕ್ಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯದ ಬಗ್ಗೆ ಅಚ್ಚುಕಟ್ಟಾಗಿ ಸಂದೇಶ ನೀಡಿದ್ದಾರೆ. ಈ ಮೂಲಕ ಎಲ್ಲ ವರ್ಗದ ವೀಕ್ಷಕರನ್ನು ತಲುಪುವ ಪ್ರಯತ್ನವನ್ನು ನಿರ್ದೇಶಕ ಮಂಜು ಹೆದ್ದೂರು ಮೂಡಿದ್ದಾರೆ.
ಕಲಾವಿದರಾಗಿ ಬಾಲಾಜಿ ಮನೋಹರ್, ಕಿರಣ್ ನಾಯಕ್, ನಟನ ಪ್ರಶಾಂತ್, ಸುಧಾಕರ್ ಬನ್ನಂಜೆ ಹಾಗೂ ಬಾಲ ಕಲಾವಿದರಾದ ದಿಗಂತ್, ಮಿಥುನ್, ಗೌತಮಿ, ಆಯುಶ್ ತಮ್ಮ ನೈಜ ನಟನೆಯೊಂದಿಗೆ ಪ್ರೇಕ್ಷಕರನ್ನು ಪ್ರಾರಂಭದಿಂದ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ, ನಿರ್ದೇಶಕರು ಕುತೂಹಲದ ಕಥೆ ಮತ್ತು ಹಾಸ್ಯ ಸನ್ನಿವೇಶಗಳ ಮೂಲಕ ರಂಜಿಸಿದ್ದಾರೆ.
ನೋಡುಗರಿಗೆ ತಮ್ಮ ಹಳೆಯ ಶಾಲಾ ದಿನಗಳನ್ನು ನೆನಪುಗಳು ಮರುಕಳಿಸುವುದರ ಜೊತೆಗೆ ಮಲೆನಾಡ ಪ್ರಕೃತಿಯ ರಮಣೀಯ ದೃಶ್ಯ ವೈಙವ, ಗ್ರಾಮೀಣ ಜನರ ಭಾಷಾಸೊಗಡು, ಉಡುಗೆ ತೊಡುಗೆಗಳು ಹಾಗೂ ಹಳ್ಳಿಯ ಜೀವನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಚಿತ್ರದ ಕ್ಯಾಮೆರಾ ವರ್ಕ್ ಹಾಗೂ ಸಂಗೀತ ಕಥೆಗೆ ಪೂರಕವಾಗಿದೆ.