ವಿಭಿನ್ನ ಶೀರ್ಷಿಕೆ ಕೆಂಪು ಹಳದಿ ಹಸಿರು ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಅಂಡ್ ಫಿಲಂಸ್ ಬ್ಯಾನರ್ ಮೂಲಕ ಪ್ರಸಾದ್‌ಕುಮಾರ್ ನಾಯ್ಕ್ ಬಂಡವಾಳ ಹೂಡುತ್ತಿರುವುದು ಮೂರನೇ ಅನುಭವ. ಒಂದು ತುಳು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಣಿ.ಎಜೆ.ಕಾರ್ತಿಕೇಯನ್ ಮೊದಲ ಬಾರಿ ಕನ್ನಡ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. `ಸ್ಟಾಪ್, ಥಿಂಕ್ ಅಂಡ್ ಪ್ರೊಸೀಡ್ ಇನ್ ಲೈಫ್` ಎಂಬ ಅರ್ಥಪೂರ್ಣ ಅಡಿಬರಹ ಇರಲಿದೆ. ಬಾಲಾಜಿ ಫಿಲಂ ವರ್ಕ್ಸ್ ಅಡಿಯಲ್ಲಿ ಪ್ರಸಾದ್ ಈರ್ಲಾ ಮತ್ತು ಹರೀಶ್ ಧಾಸ್ಮಾನ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.
ಉದ್ಯಮಿಯ ಮಗನಾಗಿ ಯಾವುದೋ ಒಂದು ಕಾರಣಕ್ಕಾಗಿ ಡಿಲಿವರಿ ಬಾಯ್ ಆಗಿರುವ ಶ್ರೀಹನ್‌ದೀಪಕ್ ನಾಯಕ. ದಿವ್ಯಾಸುರೇಶ್ ನಾಯಕಿ. ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್, `ಒಂದು ಮೊಟ್ಟೆಯ ಕಥೆ`ಯಲ್ಲಿ ಮುಖ್ಯ ಪಾತ್ರವಹಿಸಿದ್ದ ಶೈಲಾಶ್ರೀ ಮುಲ್ಕಿ ಉಳಿದಂತೆ ಚಿಂದೋಡಿ ವಿಜಯ್‌ಕುಮಾರ್, ಶ್ರೀಜನ್, ಮೀನಾಕ್ಷಿಹರ್ತಿ, ಮಾನಸ್, ಉಮೇಶ್‌ಹೆಗಡೆ ಕಡ್ತಲಾ ಮುಂತಾದವರು ಅಭಿನಯಿಸಿದ್ದಾರೆ.
ಛಾಯಾಗ್ರಹಣ ಮಂಜುನಾಥ್ ನಾಯಕ್, ನಿರ್ದೇಶಕರು ಹಾಗೂ ಕಿಶೋರ್ ಮೂಡಬಿದ್ರ್ರೆ ಬರೆದಿರುವ ನಾಲ್ಕು ಹಾಡುಗಳಿಗೆ ಮುಂಬೈ ಮೂಲದ ವಿಕಾಶ್ ವಿಶ್ವಕರ್ಮ ಸಂಗೀತ ಸಂಯೋಜಿಸಿದ್ದಾರೆ. ಸಂಕಲನ ಸತೀಶ್ ಈರ್ಲಾ, ಹಿನ್ನಲೆ ಶಬ್ದ ಪ್ರೇಮ್ ಭರತ್, ನೃತ್ಯ ಗೀತಾ (ಸ್ಪೆ) ಅವರದಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಹೆಸರೇ ಹೇಳುವಂತೆ ಪಾತ್ರಗಳ ಭಾವನೆಗಳನ್ನು ಹೇಳಲಾಗುತ್ತಿದೆ. ಕೆಂಪು, ಹಳದಿ, ಹಸಿರು ಎನ್ನುವಂತ ಮೂರು ರೋಲ್‌ಗಳು ಇರುತ್ತದೆ. ಇವರು ಸನ್ನಿವೇಶಗಳನ್ನು ಹುಡುಕಲು ಹೋದಾಗ ಉತ್ತರ ಸಿಗುತ್ತದೆ. ಅದನ್ನು ಹೇಗೆ ಎದುರಿಸುತ್ತಾರೆ. ತ್ರಿಕೋನ ಪ್ರೇಮಕಥೆಯು ಸೆಸ್ಪೆನ್ಸ್, ಥ್ರಿಲ್ಲರ್ ಕಾಮಿಡಿಯಾಗಿ ಹೋಗುತ್ತದೆ. ಸಣ್ಣ ಎಳೆ ಬಿಟ್ಟುಕೊಟ್ಟರೂ ಒಟ್ಟಾರೆ ಸಿನಿಮಾದ ಸಾರ ತಿಳಿಸಿದಂತೆ ಆಗುತ್ತದೆ. ಅದಕ್ಕಾಗಿ ಗೌಪ್ಯವಾಗಿಡಲಾಗಿದೆ. ಮಂಗಳೂರು, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಿಸೆಂಬರ್ ಮೊದಲನೇ ವಾರದಲ್ಲಿ ತೆರೆಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಮಣಿ.ಎಜೆ.ಕಾರ್ತಿಕೇಯನ್ ಮಾಹಿತಿ ನೀಡಿದರು.