ಬಹುತೇಕ ಉತ್ತರ ಕರ್ನಾಟಕದ ಮಂದಿಯೇ ಸೇರಿ ನಿರ್ಮಾಣ ಮಾಡಿರುವ ಚಿತ್ರ ಹುಲಿಬೀರ ಅ.2ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ರಂಗ್ ಬಿರಂಗಿ ಖ್ಯಾತಿಯ ಮದರಂಗಿ ಮಲ್ಲಿಕಾರ್ಜುನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಯರ್ರಾಬಿರ್ರಿ ಖ್ಯಾತಿಯ ರೂರಲ್ ಹೀರೋ ಅಂಜನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಚೈತ್ರ ತೋಟದ, ವನು ಪಾಟೀಲ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಉತ್ತರ ಕರ್ನಾಟಕದ ನೇಟಿವಿಟಿ, ಸೊಗಡು, ನಾಯಕ, ನಾಯಕಿ, ನಿರ್ಮಾಪಕ, ನಿರ್ದೇಶಕ ಹೀಗೆ ಎಲ್ಲರೂ ಉತ್ತರ ಕರ್ನಾಟಕದವರೇ ಆಗಿರುವುದು ಈ ಚಿತ್ರದ ವಿಶೇಷ.
ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಮದರಂಗಿ ಮಲ್ಲಿಕಾರ್ಜುನ ಅವರ ನಿರ್ದೇಶನದ ಐದನೇ ಚಿತ್ರ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಧೈರ್ಯದಿಂದ ಮುನ್ನುಗ್ಗುವ ಯುವಕರನ್ನು ಅವ ನೋಡು ಹುಲಿಥರ ಇದಾನೆ ಅನ್ನುತ್ತಾರೆ, ನಾಯಕ ಬೀರ ಹಳ್ಳಿಯ ಯಾವುದೇ ಸಮಸ್ಯೆ ಇರಲಿ ಮುಂದೆನಿಂತು ಕೆಲಸ ಮಾಡುತ್ತಾನೆ. ಆತನನ್ನು ಹಳ್ಳಿಯ ಜನರೆಲ್ಲ ಹುಲಿಬೀರ ಅಂತಿರ್ತಾರೆ. ಹಾಗೇ ವಿದ್ಯಾವಂತ ಯುವಕ, ಯುವತಿಯರೆಲ್ಲ ಕೆಲಸ ಅಂತ ಸಿಟಿಗೆ ಹೋದರೆ ಆ ಹಳ್ಳಿಗಳನ್ನು ಬೆಳೆಸೋರು ಯಾರು, ಈ ಸಮಸ್ಯೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ. ಅವರೆಲ್ಲ ಮತ್ತೆ ಹೇಗೆ ಹಳ್ಳಿಗೆ ಮರಳುವಂತೆ ಮಾಡಿ ಹುಲಿಬೀರ ಎನಿಸಿಕೊಳ್ಳುತ್ತಾನೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಕಾಮಿಡಿ, ಸೆಂಟಿಮೆಂಟ್ , ಮನರಂಜನೆಯ ಜತೆಗೆ ಒಂದೊಳ್ಳೆ ಮೆಸೇಜ್ ಈ ಚಿತ್ರದಲ್ಲಿದೆ. ಬಾದಾಮಿ, ಸುತ್ತಮುತ್ತಲ ಗ್ರಾಮಗಳಲ್ಲಿ 51 ದಿನಗಳವರೆಗೆ ಹಾಡು ಹಾಗೂ ಮಾತಿನ ಭಾಗವನ್ನು ಚಿತ್ರೀಕರಿಸಲಾಗಿದೆ. ಹಿರಿಯ ನಟ ರಂಗಾಯಣ ರಘು ಗ್ರಾಮದ ಹಿರಿಯನಾಗಿ ಕಾಣಿಸಿಕೊಂಡಿದ್ದಾರೆ. ರಾಜೇಂದ್ರ ಕಾರಂತ್, ಮಲ್ಲು ಬಾಗಲಕೋಟ,ಸಂತೋಷ್ ಕೇರಿ, ರೇವಣ್ಣ ಉಳಿದ ತಾರಾಗಣದಲ್ಲಿದ್ದಾರೆ. ವೀರಸಮರ್ಥ ಅವರ ಸಂಗೀತ ಸಂಯೋಜನೆ, ಧರ್ಮ ವಿಶ್ ಅವರ ಹಿನ್ನೆಲೆ ಸಂಗೀತ, ಸನಾತನ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ.