ಚಿತ್ರ: ಶಬರಿ,
ನಿರ್ದೇಶನ: ಒರಟ ಶ್ರೀ,
ನಿರ್ಮಾಪಕ: ರಮೇಶ್ ಬಿ. ಬದ್ರಿ, ವಿಷ್ಣುಕಾಂತ್,
ಸಂಗೀತ: ಬಿ.ಆರ್. ಹೇಮಂತ್ ಕುಮಾರ್,ಛಾಯಾಗ್ರಹಣ: ಸಾಮ್ರಾಟ್ ನಾಗರಾಜ್,
ಕಲಾವಿದರು: ಸಮರ್ಥ್ ರಮೇಶ್, ಕೃತಿಕಾ ಗೌಡ, ಬೇಬಿ ಧನ್ವಿ, ನೀನಾಸಂ ಅಶ್ವತ್ಥ್ ಹಾಗೂ ಇತರರು.
ಮನುಷ್ಯನಿಗೆ ಪ್ರೀತಿ, ಆಸೆ ಹುಟ್ಟೋದು ಹೆಣ್ಣು, ಹೊನ್ನು, ನೆಲದ ಮೇಲಷ್ಟೇ ಅಲ್ಲ, ಅತಿ ಹೆಚ್ಚು ಇಷ್ಟಪಡುವ ಪ್ರಾಣಿ, ವಾಹನದ ಮೇಲೂ ಆಗಿರಬಹುದು, ಆ ಪ್ರೀತಿ ಅತಿಯಾದರೆ ಏನೆಲ್ಲ ನಡೆದುಹೋಗಬಹುದು ಎಂಬುದನ್ನು ಶಬರಿ ಚಿತ್ರದ ಮೂಲಕ ನಿರ್ದೆಶಕ ಒರಟ ಶ್ರೀ ಅವರು ಹೇಳಲು ಪ್ರಯತ್ನಿಸಿದ್ದಾರೆ.
ಸಂಬಂಧಗಳಿಗಿಂತ ಮನುಷ್ಯನ ಇಷ್ಟವೇ ಮೇಲಾದಾಗ ಆ ಕುಟುಂಬದಲ್ಲಿ ಏನೆಲ್ಲ ತೊಂದರೆಗಳಾಗಬಹುದು ಎಂಬ ಅಂಶಗಳ ಮೇಲೆ ಶಬರಿ ಚಿತ್ರಕಥೆ ನಡೆಯುತ್ತದೆ.
ನಾಯಕ ರಾಮನಿಗೆ(ಸಮರ್ಥ್ ರಮೇಶ್) ಚಿಕ್ಕವನಿದ್ದಾಗಿಂದಲೂ ಜೀಪ್ ಎಂದರೆ ಪ್ರಾಣ. ಒಂದು ಆಟಿಕೆಯ ಜೀಪನ್ನು ಜಾಗ್ರತೆಯಿಂದ ಕಾಪಾಡಿಕೊಂಡು ಬಂದಿರುತ್ತಾನೆ. ಆ ಜೀಪು ಕಳೆದುಹೋದರೂ ಅದರ ಮೇಲಿನ ವ್ಯಾಮೋಹ ರಾಮನ ಭವಿಷ್ಯದ ಜೀವನದ ಪ್ರಮುಖ ತಿರುವುಗಳಿಗೆ ಕಾರಣವಾಗುತ್ತದೆ. ಆ ಜೀಪನ್ನು ಮರಳಿ ಪಡೆಯಬೇಕೆಂಬ ಹಂಬಲ ಆತನ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಗಂಡ ಹೆಂಡತಿಯ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಇದೇ ವೇಳೆ ನಡೆದ ಬೆಂಕಿ ಅನಾಹುತದಲ್ಲಿ ತನ್ನ ಹೆಂಡತಿಯನ್ನೂ ಸಹ ಕಳೆದುಕೊಳ್ಳುತ್ತಾನೆ, ಕಳೆದುಕೊಂಡಿದ್ದ ಜೀಪನ್ನೂ ಪಡೆದುಕೊಳ್ಳುತ್ತಾನೆ, ಸ್ನೇಹಿತೆಯ ಮೂಲಕ ಹೆಂಡತಿಯ ಬಗ್ಗೆ ಗೊತ್ತಾಗುತ್ತದೆ, ಅದೇ ಬೇಸರದಲ್ಲಿ ಕುಡಿತಕ್ಕೆ ಬಲಿಯಾಗಿ, ಪಶ್ಚಾತಾಪದಿಂದ ಏಕಾಂಗಿಯಾಗಿ ಅಲೆದಾಡುತ್ತಾನೆ. ಆ ಸಮಯದಲ್ಲಿ ರಾಮನ ಜೀವನದಲ್ಲಿ ಬಾಲಕಿ ಶಬರಿಯ ಪ್ರವೇಶವಾಗಿ ಹೊಸ ಆಶಾಕಿರಣ ಮೂಡುತ್ತದೆ.
ಒಮ್ಮೆ ಪುಟ್ಟ ಬಾಲಕಿ ಶಬರಿ(ಬೇಬಿ ಧನ್ವಿ) ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದು ರಾಮನ ಜೀಪಲ್ಲಿ ಕುಳಿತಿರುತ್ತಾಳೆ. ನೀನು ಯಾರೆಂದು ರಾಮು ವಿಚಾರಿಸಿದಾಗ ಆಕೆಗೆ ಕನ್ನಡ ಬರಲ್ಲ ಅಂತ ಗೊತ್ತಾಗುತ್ತದೆ. ಈತನಿಗೋ ಹಿಂದಿ ಬರಲ್ಲ, ಆದರೂ ಇಬ್ಬರ ನಡುವೆ ಒಂದು ಬಾಂಧವ್ಯ ಬೆಳೆಯುತ್ತದೆ.
ಮನುಷ್ಯನ ಮನಸ್ಸು, ಅವನ ನಿರ್ಧಾರಗಳು, ತಪ್ಪುಗಳ ಅರಿವು ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನದ ಸುತ್ತ ನಡೆಯುವ ಘಟನೆಗಳನ್ನು ನಿರ್ದೇಶಕ ಒರಟ ಶ್ರೀ ಅವರು ತುಂಬಾ ಚೆನ್ನಾಗಿ ಮೂಡಿಸಿದ್ದಾರೆ. ಒಂದೊಳ್ಳೆಯ ಸಾಮಾಜಿಕ ಜವಾಬ್ದಾರಿಯ ಭಾವನಾತ್ಮಕ ಚಿತ್ರವನ್ನು ಕಟ್ಟಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.ಸಮರ್ಥ್ ರಮೇಶ್ ರಾಮನ ಪಾತ್ರದ ಮೂಲಕ ಮನುಷ್ಯನ ಹಠ, ಅದರಿಂದ ಎದುರಾಗುವ ಸಮಸ್ಯೆಗಳು ಹಾಗೂ ಮನಸ್ಸಿನಲ್ಲಾಗುವ ತುಮುಲಗಳನ್ನು ಅಭಿವ್ಯಕ್ತಿಸುವಲ್ಲಿ ಪ್ರಯತ್ನಿಸಿದ್ದಾರೆ.
ನಾಯಕಿ ಕೃತಿಕಾ ಗೌಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬಾಲನಟಿ ಧನ್ವಿ ಅವರ ಪಾತ್ರ ಕಥೆಯ ಭಾವನಾತ್ಮಕ ತಿರುವಿಗೆ ಸಾಥ್ ನೀಡಿದೆ. ರಾಮನ ಬಾಳಲ್ಲಿ ಶಬರಿ ಬಂದ ನಂತರ
ಆತನ ಜೀವನಶೈಲಿ ಬದಲಾಗುತ್ತದೆ.
ಪುಟ್ಟ ಬಾಲಕಿ ಧನ್ವಿ ಭಾವನಾತ್ಮಕ ಸನ್ನಿವೇಶಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿಭಾಯಿಸಿದ್ದಾಳೆ.
ನೀನಾಸಂ ಅಶ್ವತ್ಥ ಸೇರಿದಂತೆ ಪೋಷಕ ಕಲಾವಿದರೆಲ್ಲ. ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.
ಬಿ.ಆರ್. ಹೇಮಂತ್ ಕುಮಾರ್ ಅವರ ಸಂಗೀತ, ಸಾಮ್ರಾಟ್ ನಾಗರಾಜ್ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಎದುರಾಗುವ ಭಾವನಾತ್ಮಕ ತಿರುವು ಈ ಚಿತ್ರ ಪ್ಲಸ್ ಪಾಯಿಂಟ್ ಎನ್ನಬಹುದು.