Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಲವು ಗಣ್ಯರ ಉಪಸ್ಥಿತಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ದಿನದಂದು ಅದ್ದೂರಿಯಾಗಿ ಅನಾವರಣವಾಯಿತು AI ತಂತ್ರಜ್ಞಾನದಲ್ಲಿ ಮೂಡಿಬಂದಿರುವ - ರಾಣಿ ಚೆನ್ನಮ್ಮ- ಚಿತ್ರದ ಮೊದಲ ಹಾಡು
Posted date: 25 Sun, Oct 2026 09:24:13 PM
ಲತಾ ಜೈಪ್ರಕಾಶ್ ಅವರು ಬಿಎಂಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿರುವ, ಶ್ವೇತಾ ಶೆಟ್ಟಿ ನಿರ್ದೇಶನದ ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ನಿರ್ಮಿಸಲಾಗಿರುವ ಐತಿಹಾಸಿಕ ಚಿತ್ರ “ರಾಣಿ ಚೆನ್ನಮ್ಮ” ಚಿತ್ರದ ಮೊದಲ ಹಾಡಿನ ಅನಾವರಣ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ದಿನದಂದು ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು‌. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ||ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಕೆ.ವಿ.ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಕೆ.ಮಂಜು, ವಿತರಕ ಹಾಗೂ ನಿರ್ಮಾಪಕ ಕೆ.ಸಿ.ಎನ್ ಕುಮಾರ್, ಹಿರಿಯ ನಟಿ ಗಿರಿಜಾ ಲೋಕೇಶ್, ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು, ನಟಿಯರಾದ ಪ್ರಿಯಾಂಕ ಉಪೇಂದ್ರ, ಕಾರುಣ್ಯಾರಾಮ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್, ನಟಿ ಪ್ರಿಯಾಂಕ ಉಪೇಂದ್ರ ಸೇರಿದಂತೆ ಅನೇಕ ಮಹಿಳಾ ಸಾಧಕಿಯರಿಗೆ "ರಾಣಿ ಚೆನ್ನಮ್ಮ ಮಹಿಳಾ ಸಾಧಕಿಯರ ಪ್ರಶಸ್ತಿ" ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ  ಪುರುಷ ಸಾಧಕರಿಗೆ "ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಚಿತ್ರತಂಡದ ಸದಸ್ಯರು "ರಾಣಿ ಚೆನ್ನಮ್ಮ" ಚಿತ್ರದ ಕುರಿತು ಮಾತನಾಡಿದರು.  

ನಮ್ಮ ಚಿತ್ರದ ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಗಣ್ಯರಿಗೆ ಹಾಗೂ ನನ್ನ ತಂದೆ - ತಾಯಿಗೆ ನಮಸ್ಕಾರ ಪೂರ್ವಕವಾಗಿ ಧನ್ಯವಾದ ತಿಳಿಸುತ್ತೇನೆ. ಕಿತ್ತೂರಿನ ಗರ್ವ, ಧೈರ್ಯ, ಹೆಮ್ಮೆ ಮತ್ತು ಸ್ವಾಭಿಮಾನದ ಪ್ರತೀಕವಾದ ರಾಣಿ ಚೆನ್ನಮ್ಮ ಅವರ ಜೀವನಗಾಥೆಯನ್ನು ಆಧರಿಸಿದ ಈ ಚಿತ್ರವು, ಇತಿಹಾಸ ವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪುನರ್ಜೀವಗೊಳಿಸುವ ಮಹತ್ವಾಕಾಂಕ್ಷಿಯ ಪ್ರಯತ್ನವಾಗಿದೆ. ನಿರ್ದೇಶಕಿ ಶ್ವೇತಾ ಶೆಟ್ಟಿ ಅವರು ಈ ಚಿತ್ರದ ಕುರಿತು ಹೇಳಿದ ತಕ್ಷಣ ಸಂತೋಷವಾಯಿತು. ಈಗಿನ ಮಕ್ಕಳಿಗೆ AI ಮೂಲಕ ಹೇಳಿದಾಗ ಬೇಗ ಅರ್ಥವಾಗುತ್ತದೆ. ಹಾಗಾಗಿ ನಾವು AI ನಲ್ಲೇ ಈ ಚಿತ್ರ ಮಾಡಲು ನಿರ್ಧಾರ ಮಾಡಿದ್ದೆವು. ವಿತರಕ ಕೆ.ಸಿ.ಎನ್ ಕುಮಾರ್ ಅವರು ನಮ್ಮ ಜೊತೆಯಾಗಿ ನಿಂತು ಪ್ರೋತ್ಸಾಹ ನೀಡಿದರು. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ರಾಣಿ ಚೆನ್ನಮ್ಮ ಅವರ ಸಾಧನೆಗೆ ಅವರ ತಂದೆಯವರ ಬೆಂಬಲವೇ ಪ್ರಮುಖ ಕಾರಣ. ಇಂದು ರಾಣಿ ಚೆನ್ನಮ್ಮ ಹಾಗೂ ಅವರ ತಂದೆಯ ಕುರಿತಾದ ಹಾಡೇ ಅನಾವರಣವಾಗಿದೆ. ಈ ಹಾಡು ಪರದೆಯ ಮೇಲೆ ಮೂಡಿಬರುತ್ತಿದ್ದ ಸಂದರ್ಭದಲ್ಲಿ ನನ್ನ ಎಲ್ಲಾ ಕೆಲಸಗಳಿಗೂ ಪ್ರೋತ್ಸಾಹ ನೀಡುವ ನನ್ನ ತಂದೆ ಸಮಾರಂಭಕ್ಕೆ ಬಂದಿದ್ದು ಕಾಕತಾಳೀಯವಾಗಿತ್ತು. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ಲತಾ ಜೈಪ್ರಕಾಶ್.  
   
ಈ ಚಿತ್ರದ ಪ್ರಮುಖ ವಿಶೇಷವೆಂದರೆ, ಚಿತ್ರದಲ್ಲಿನ ದೃಶ್ಯ ವಿನ್ಯಾಸ, ಪಾತ್ರ ರೂಪಕ, ಯುದ್ಧದ ಸನ್ನಿವೇಶಗಳು ಸೇರಿದಂತೆ ಬಹುಪಾಲು ವಿಷುಯಲ್ ಅಂಶಗಳನ್ನು AI ತಂತ್ರಜ್ಞಾನದಿಂದ ರೂಪಿಸಲಾಗಿದೆ. ಕನ್ನಡ ಸಿನೆಮಾದಲ್ಲಿ ಇದು ಹೊಸ ಪ್ರಯೋಗವಾಗಿದೆ. ವಿಶೇಷವಾಗಿ, ಈ ಚಿತ್ರದ ವೀಡಿಯೋ ನಿರ್ಮಾಣದಲ್ಲಿ AI ತಂತ್ರಜ್ಞಾನವನ್ನು ಬಳಸಲಾಗಿದ್ದು, ಆಡಿಯೋ ಪ್ರೊಡಕ್ಷನ್ ಸಂಪೂರ್ಣವಾಗಿ ಮ್ಯಾನುಯಲ್ ರೀತಿಯಲ್ಲಿರುತ್ತದೆ. "ರಾಣಿ ಚೆನ್ನಮ್ಮ" ಚಿತ್ರಕ್ಕೆ "ಕಿತ್ತೂರಿನ ಗತ್ತು ದೇಶಕ್ಕೆ ಗೊತ್ತು" ಎಂಬ ಅಡಿಬರಹವಿದೆ. ಈ ಚಿತ್ರಕ್ಕೆ ಶ್ರೀಹರಿ ಸಂಗೀತ ನೀಡಿದ್ದಾರೆ. ಸಂಕಲನವನ್ನು ಸಂಜೀವ್ ರೆಡ್ಡಿ ನಿರ್ವಹಿಸಿದ್ದು, ಹಾಡುಗಳನ್ನು  ಶಿವನಂಜೆಗೌಡ ಮತ್ತು ಡಾ|| ವಿ.ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ. ಸಾಯಿ ತೋಷಿತ್ ವಿಷುಯಲ್ ಕ್ರಿಯಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಲತಾ ಜೈಪ್ರಕಾಶ್ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ ಎಂದು ನಿರ್ದೇಶಕಿ ಶ್ವೇತಾ ಶೆಟ್ಟಿ ತಿಳಿಸಿದರು. 

ಸಂಗೀತ ನಿರ್ದೇಶಕ ಶ್ರೀಹರಿ, ಚಿತ್ರಕಥೆ ಬರೆದಿರುವ ಬೆನಕ ಕೊಟ್ರೇಶ್, ಸಂಭಾಷಣೆ ಬರೆದಿರುವ ದೀಪಕ್ ಹಾಗೂ ಗೀತರಚನೆಕಾರರಾದ ಡಾ|ವಿ.ನಾಗೇಂದ್ರಪ್ರಸಾದ್, ಶಿವನಂಜೇಗೌಡ, ಮುಂತಾದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಲವು ಗಣ್ಯರ ಉಪಸ್ಥಿತಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ದಿನದಂದು ಅದ್ದೂರಿಯಾಗಿ ಅನಾವರಣವಾಯಿತು AI ತಂತ್ರಜ್ಞಾನದಲ್ಲಿ ಮೂಡಿಬಂದಿರುವ - ರಾಣಿ ಚೆನ್ನಮ್ಮ- ಚಿತ್ರದ ಮೊದಲ ಹಾಡು - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95