Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶ ಸಾರುವ ‘ಬೆಳಗು’ ಶೀಘ್ರದಲ್ಲೇ ತೆರೆಗೆ
Posted date: 29 Thu, Oct 2026 10:04:37 AM
ಮೀಡಿಯಾ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ಡಾ. ಮದನ್ ಪಟೇಲ್ ನಿರ್ಮಿಸಿ, ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಮಯೂರ್ ಪಟೇಲ್ ನಾಯಕನಾಗಿ ನಟಿಸಿರುವ ‘ಬೆಳಗು’ (ದಿ ಲೈಟ್) ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡರು.

ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶ ಸಾರುವ ‘ಬೆಳಗು’ ಚಿತ್ರವು ರೈಲ್ವೆ ಗೇಟ್‌ಮನ್‌ನ ಬದುಕಿನ ಸುತ್ತ ಸಾಗುತ್ತದೆ. ಬಾಲ್ಯದಲ್ಲಿ ಓದುವ ಆಸೆಯಿದ್ದರೂ ಸೂಕ್ತ ಸೌಲಭ್ಯಗಳಿಲ್ಲದೆ ಶಿಕ್ಷಣದಿಂದ ವಂಚಿತನಾಗುವ ಶಿವು, ಮುಂದೆ ರೈಲ್ವೆ ಗೇಟ್‌ಮನ್ ಆಗಿ ಕೆಲಸಕ್ಕೆ ಸೇರಿದ ಬಳಿಕ ಕಲಿಕೆಯ ಪಯಣ ಆರಂಭಿಸುತ್ತಾನೆ. ರೈಲ್ವೆ ಗೇಟ್‌ನ ಏಕಾಂತದ ಬದುಕು ಹಾಗೂ ನಾಯಿಮರಿಯೊಂದಿಗಿನ ಒಡನಾಟ ಅವನ ಜೀವನದಲ್ಲಿ ತರುವ ಬದಲಾವಣೆಗಳೇ ಚಿತ್ರದ ಕಥಾವಸ್ತು.

ನಿರ್ದೇಶಕ ಡಾ. ಮದನ್ ಪಟೇಲ್ ಮಾತನಾಡಿ, ಇದು ತಮ್ಮ ಮೂರನೇ ಕಾದಂಬರಿಯನ್ನು ಆಧರಿಸಿದ ಚಿತ್ರ ಎಂದು ತಿಳಿಸಿದರು. 2009ರಲ್ಲಿ ಅಮೆರಿಕದ ಚಿಕಾಗೋದಲ್ಲಿ ತಮ್ಮ ಸಾಹಿತ್ಯ ಪಯಣ ಆರಂಭವಾಗಿದ್ದು, ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಅವರ ಪ್ರೋತ್ಸಾಹ ಬರವಣಿಗೆಗೆ ಸ್ಫೂರ್ತಿ ನೀಡಿತು. ತಮ್ಮ ಎರಡನೇ ಕಾದಂಬರಿ ‘ಮಹಾಮಾಯಿ’ಗೆ ಡಾ. ಮಲ್ಲೇಪುರಂ ವೆಂಕಟೇಶ್ ಮುನ್ನುಡಿ ಬರೆದಿದ್ದರು ಎಂದು ಸ್ಮರಿಸಿದರು.

1993ರಲ್ಲಿ ‘ಇಂಡಿಯನ್’ ಚಿತ್ರದ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟ ಡಾ. ಮದನ್ ಪಟೇಲ್, ದೇವರಾಜ್ ನಾಯಕನಾಗಿ ನಟಿಸಿದ್ದ ಆ ಚಿತ್ರದಲ್ಲಿ ಸಿತಾರಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಂತರ ‘ಮಹಾ ಚತುರ’, ‘ಆಂಧ್ರ ಹೆಂಡ್ತಿ", "ಪೊಲೀಸ್ ಆಫೀಸರ್ಸ್", "ಓಕೆ ಸರ್ ಓಕೆ", " ಲವ್ ಸ್ಟೋರಿ ", " ಸ್ವಾಮಿ ಸತ್ಯಾನಂದ", "ಹೀಗೂ ಉಂಟೆ", " ನಿನದೇ ನೆನಪು", "ತಮಟೆ" ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ನಾಯಕ ಮಯೂರ್ ಪಟೇಲ್ ಮಾತನಾಡಿ, “ಕಮರ್ಷಿಯಲ್ ಅಂಶಗಳಿಗಿಂತ ಕಥೆ ಮತ್ತು ಪಾತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ ಈ ಚಿತ್ರ ಮಾಡಿದ್ದೇವೆ. ಶಿವು ಪಾತ್ರದ ಮೂಲಕ ಯಾವ ವಯಸ್ಸಿನಲ್ಲಾದರೂ ಶಿಕ್ಷಣ ಪಡೆಯಬಹುದು ಎಂಬ ಸಂದೇಶವನ್ನು ಹೇಳಿದ್ದೇವೆ. ಬಳ್ಳಾರಿ ಸಮೀಪದ ಸಿಂಗಲ್ ರೈಲ್ವೆ ಲೈನ್ ಹಾಗೂ ಬಿಡದಿ–ರಾಮನಗರದ ನಡುವಿನ ಹಳ್ಳಿಯಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಯಾವುದೇ ರಾಜಿ ಮಾಡಿಕೊಳ್ಳದೆ ಚಿತ್ರವನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಇಂತಹ ಉತ್ತಮ ಕಥೆ ಮತ್ತು ಶಿಕ್ಷಣದ ಮಹತ್ವ ಸಾರುವ ಚಿತ್ರಕ್ಕೆ ಪ್ರೇಕ್ಷಕರು ಬೆಂಬಲ ನೀಡಬೇಕು” ಎಂದು ಮನವಿ ಮಾಡಿದರು.

ಚಿತ್ರದಲ್ಲಿ ಮಯೂರ್ ಪಟೇಲ್ ನಾಯಕನಾಗಿ ನಟಿಸಿದ್ದು, ವೆಂಕಟೇಶ್ ಪ್ರಸಾದ್ ಅವರು ಶಾಂತಣ್ಣ ಎಂಬ ರೈಲ್ವೆ ಗೇಟ್‌ಮನ್ ಪಾತ್ರ ನಿರ್ವಹಿಸಿದ್ದಾರೆ. ಬಳ್ಳಾರಿಯ ಪುಟ್ಟ ಬಾಲಕಿ ಪವಿತ್ರ ಅವರ ಪಾತ್ರವೂ ಕಥೆಯಲ್ಲಿ ಪ್ರಮುಖವಾಗಿದೆ. ರೈಲ್ವೆ ಇಲಾಖೆಯ ಅನುಮತಿ ಪಡೆದು ಸುಮಾರು ಎಂಟು ದಿನಗಳ ಕಾಲ ಬಳ್ಳಾರಿ ಸಮೀಪ ಚಿತ್ರೀಕರಣ ನಡೆಸಲಾಗಿದ್ದು, ಬಳಿಕ ಬಿಡದಿ–ರಾಮನಗರದ ನಡುವಿನ ಹಳ್ಳಿಯಲ್ಲಿಯೂ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ.

ಚಿತ್ರದಲ್ಲಿ ನಟಿಸಿರುವ ವೆಂಕಟೇಶ್ ಪ್ರಸಾದ್, ವಿನಯ್ ಕೃಷ್ಣಸ್ವಾಮಿ, ಗೋಕುಲ್, ಪವಿತ್ರಾ ನಾಯಕ್, ಛಾಯಾಗ್ರಾಹಕ ನಾಗೇಶ್, ಸಂಕಲನಕಾರ ಲಿಂಗರಾಜು ಹಾಗೂ ನಿರ್ಮಾಪಕಿ ರೇಖಾ ಮದನ್ ಪಟೇಲ್ ಅವರು ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶೀಘ್ರದಲ್ಲೇ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶ ಸಾರುವ ‘ಬೆಳಗು’ ಶೀಘ್ರದಲ್ಲೇ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95