Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಬೆಟ್ಟದ ಜೀವ` ಈ ವಾರ ಬಿಡುಗಡೆ
Posted date: 16/June/2011

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ॑ ॑ಕೆ.ಶಿವರಾಮ ಕಾರಂತರ ಬಹು ಚರ್ಚಿತ ‘ಬೆಟ್ಟದ ಜೀವ ಕನ್ನಡ ಕಾದಂಬರಿ ಆಧರಿತ ಈ ಚಲನಚಿತ್ರ ಮನುಷ್ಯ ಸಂಬಂಧಗಳು ಮತ್ತು ಮನುಷ್ಯ-ಪ್ರಕೃತಿಯ ಒಡನಾಟವನ್ನು ಕುರಿತದ್ದು.
ಬ್ರಿಟಿಷರ ಆಳ್ವಿಕೆಯ ವಿರುದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮದ ತೀವ್ರತೆ ಹೆಚ್ಚಿದ್ದ ದಿನಗಳು. ಸಾಮಾನ್ಯ ಜನರಲ್ಲಿ ಈ ವಿಷಯದ ಬಗ್ಗೆ ಜಾಗೃಇ ಮೂಡಿಸುತ್ತಾ ಊರಿಂದ ಊರಿಗೆ ತಿರುಗಾಡುತ್ತಿದ್ದ ತರುಣ ಶಿವರಾಮು ಒಮ್ಮೆ ದಟ್ಟವಾದ ಕಾಡಿನಲ್ಲಿ ದಾರಿ ತಪ್ಪಿದಾಗ ಆ ರಾತ್ರಿ ಕಳೆಯಲು ಗುಡ್ಡಗಾಡಿನವರ ಸಯಾಯದಿಂದ ಕೆಳಬೈಲಿನ ಗೋಪಾಲಯ್ಯನವರ ಮನೆ ಸೇರುತ್ತಾನೆ.  ಪ್ರೀತಿ ಪೂರ್ವಕ ಒತ್ತಯಕ್ಕೆ ಮಣಿದು ಕೆಲವು ದಿನ ಅಲ್ಲಿಯೇ ಉಳಿಯುತ್ತಾನೆ.  ಆ ದಿನಗಳಲ್ಲಿ ಶಿವರಾಮುವಿನ ಅರಿವಿಗೆ ಬರುವ ಬದುಕಿನ ವಿವಿಧ ಮುಖಗಳು ಅವನ ಮುಂದೆ ಒಂದು ಹೊಸ ಲೋಕವನ್ನೇ ತೆರೆದಿಡುತ್ತವೆ.
ಗುಡ್ಡಗಾಡು ಜನರ ಮುಗ್ಧ ಮನಸ್ಸು-ಆತಿಥ್ಯ-ಪ್ರಕೃತಿಯೊಡನೆ ಸಾಮರಸ್ಯದ ಒಡನಾಟ- ರೂಢಿಯಿಂದ ಬೆಳೆದು ಬಂದ ಅವರ ವಿವೇಕ- ಆಚರಣೆ ಅನುಷ್ಠಾನಗಳು- ದೇಶಿ ಸಂಸ್ಕೃತಿ; ಗೋಪಾಲಯ್ಯ ಮತ್ತು ಅವರ ಹೆಂಡತಿ ಶಂಕರಿಯರ ಸರಳ ಜೀವನ; ತಮ್ಮ ಸುತ್ತ ಮುತ್ತಲಿನ ಜನರ ಬಗೆಗಿನ ಅವರ ಕಾಳಜಿ; ಪ್ರಕೃತಿ ಒಡ್ಡಿದ ಸವಾಲುಗಳನ್ನು ಎದುರಿಸುತ್ತಾ ಆ ಕಾದಿನ ಮಧ್ಯೆಯೇ ಕಾಟುಮೂಲೆಯ ಸುಂದರ ತೋಟವನ್ನು ಬೆಳೆಸಿರುವ ಗೋಪಾಲಯ್ಯನವರ ಸಾಹಸ ಪ್ರವೃತ್ತಿಯ ಯಶೋಗಾಥೆ; ಇಳಿ ವಯಸ್ಸಿನಲ್ಲೂ ಉಳಿಸಿಕೊಂಡಿರುವ ಅವರ ಜೀವನೋತ್ಸಾಹ; ಬಹು ವರ್ಷಗಳಿಂದ ತಮ್ಮಿಂದ ದೂರವಾಗಿಯೇ ಉಳಿದಿರುವ ಒಬ್ಬನೇ ಮಗ ಶಂಭುವನ್ನು ನೋಡಲು ಪರಿತಪಿಸುತ್ತಿರುವ ಶಂಕರಿ; ಅದೇ ಕಾರಣಕ್ಕೆ ಗೋಪಾಲಯ್ಯ ಅನುಭವಿಸುತ್ತಿರುವ ಮಾನಸಿಕ ನೋವು; ಶಂಭುವಿನ ವಿಷಯದಲ್ಲಿ ವಿವಿಧ ಪಾತ್ರಗಳು ಶಿವರಾಮುವಿನ ಮುಂದೆ ಮುಕ್ತವಾಗಿ ತೆರೆದುಕೊಳ್ಳುವಾಗ ಮನಸ್ಸಿನಲ್ಲೇ ಹುಗಿದಿಟ್ಟಿದ್ದ ಅವರವರ ಊಹೆಗಳು- ಆತಂಕಗಳು- ಅಪರಾಧಿ ಪ್ರಜ್ಞೆಗಳು ಎಲ್ಲರನ್ನೂ ಆತ್ಮಾವಲೋಕನಕ್ಕೆ ಹಚ್ಚುವ ಪ್ರಕ್ರಿಯೆ- ಇವೆಲ್ಲ ಶಿವರಾಮುವಿನ ಅರಿವನ್ನೂ ಹಿಗ್ಗಿಸಿ ಅವನು ಬದುಕಿನ ನಿಜವಾದ ಅರ್ಥವನ್ನು ಗ್ರಹಿಸುವುದಕ್ಕೆ ಸಹಾಯ ಮಾಡುತ್ತವೆ.
ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಈ ಸೂಕ್ಷ್ಮ ವಿಷಯಗಳ ಒಳನೋಟವನ್ನು ಹಿಡಿದಿಡುವ ಪ್ರಯತ್ನ ‘ಬೆಟ್ಟದ ಜೀವ ಚಲನಚಿತ್ರ.  ೫೮ ನೇ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಚಿತ್ರ ಎಂಬ ಮನ್ನಣೆ ದೊರೆತಿದೆ.
ಕಾರಂತರ ಈ ಕಾದಂಬರಿಯನ್ನು ಚಿತ್ರಕಥೆಯಾಗಿಸಿ, ನಿರ್ದೇಶಿಸಿದ ಖ್ಯಾತಿ ಪಿ.ಶೇಷಾದ್ರಿ ಅವರದ್ದು.  ಇದನ್ನು ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ್ದು,  ಅನಂತ್ ಅರಸ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಗೋಪಾಲಕೃಷ್ಣ ಪೈ ಸಂಭಾಷಣೆ ಕೆಂಪರಾಜ್ ಸಂಕಲನವಿದೆ.  ಹೆಚ್.ಜಿ.ದತ್ತಾತ್ರೇಯ, ಸುಚೇಂದ್ರಪ್ರಸಾದ್, ರಾಮೇಶ್ವರಿ ವರ್ಮ, ಲಕ್ಷ್ಮಿಹೆಗ್ಡೆ ಮುಂತಾದವರ ಅಭಿನಯಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಬೆಟ್ಟದ ಜೀವ` ಈ ವಾರ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.