ಬಹಳ ವರ್ಷಗಳ ನಂತರ ರಘುವೀರ್ ಮತ್ತೆ ಬಣ್ಣ ಹಚ್ಚಲಿರುವ ಯಾರಿಗೋಸ್ಕರ ಈ ಪ್ರೀತಿ ಚಿತ್ರ ನಿರ್ಮಾಣದ ಪ್ರಥಮ ಹಂತವಾಗಿ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಕಳೆದ ವಾರ ಅರುಣ್ ಸ್ಟುಡಿಯೋದಲ್ಲಿ ಪ್ರಾರಂಭವಾಯಿತು. ಚಿತ್ರದ ಶುಶ್ರಾವ್ಯವಾದ ೭ ಹಾಡುಗಳಿಗೆ ನಟ ರಘುವೀರ್ ಪ್ರಥಮ ಬಾರಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀ ಲಕ್ಷ್ಮಿ ಆರ್ಟ್ ಫಿಲಂಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಎಸ್.ರಾಜಾ ಅವರು ನಿರ್ದೇಶಿಸುತ್ತಿದ್ದು, ಚೈತ್ರದ ಪ್ರೇಮಾಂಜಲಿಗೆ ಕೆಲಸ ಮಾಡಿದ ಪಿ.ಕೆ.ಹೆಚ್. ದಾಸ್ ಅವರು ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಲಿದ್ದಾರೆ. ಈ ಚಿತ್ರದ ಹಾಡುಗಳಿಗೆ ಕೋಲಾರ ಮಂಜುನಾಥ್ ಅವರ ಸಾಹಿತ್ಯವಿದ್ದು, ನವಿರಾದ ಪ್ರೀತಿ-ಪ್ರೇಮದ ಕಥೆಯೊಂದನ್ನು ಸಾಂಸಾರಿಕ ಸಂಬಂಧ-ಅನುಬಂಧಗಳ ಜೊತೆಗೆ ಹೆಣೆಯಲಾಗಿದ್ದು, ಒಂದೇ ಹಂತದಲ್ಲಿ ಬೆಂಗಳೂರು ಹಾಗೂ ರಾಜ್ಯದ ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಶ್ರವಣನ್ ಅವರ ಕಥೆ, ಆನಂದ್ ಅವರ ಸಂಭಾಷಣೆ, ಟೈಗರ್ ಮಧು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ರಘುವೀರ್ ಜೋಡಿಯಾಗಿ ಹೊಸ ಪ್ರತಿಭೆ ಶಿಲ್ಪಾ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಾಮಕೃಷ್ಣ, ವಿಜಯಕಾಶಿ, ಶ್ರೀಲಲಿತಾ, ಅಶೋಕ್ ರಾವ್, ಕಿಲ್ಲರ್ ವೆಂಕಟೇಶ್, ಬುಲೆಟ್ ಪ್ರಕಾಶ್ ಪ್ರಮುಖ ತಾರಾಗಣದಲ್ಲಿದ್ದಾರೆ.