Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ವಾರ್ತಾ ಸಚಿವರ ಭೇಟಿ
Posted date: 16 Fri, Jul 2021 08:57:27 PM
ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿ ಇರುವ ಕನ್ನಡ ಚಲನಚಿತ್ರ ಅಮೃತೋತ್ಸವ ಭವನ ಕಟ್ಟಡ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವ ಸಂಬಂಧ ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಶ್ರೀ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ನಗರದ ನಂದಿನಿ ಬಡಾವಣೆಯಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಶ್ರೀ ಸುನೀಲ್ ಪುರಾಣಿಕ್ ಅವರ ಮನವಿಗೆ ಸ್ಪಂದಿಸಿದ ಅವರು, ಆಯವ್ಯಯ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ಅಮೃತೋತ್ಸವ ಭವನ ಕಟ್ಟಡ ಕಾಮಗಾರಿಗೆ ಅನುದಾನದ ಅಗತ್ಯವಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ತಾವು ಕಟ್ಟಡಕ್ಕೆ ಭೇಟಿ ನೀಡಿದಾಗ ನೆಲ ಮಹಡಿಯಲ್ಲಿ ಸುಸಜ್ಜಿತ ಸಭಾಂಗಣ/ಚಿತ್ರಮಂದಿರ, ತಳ ಮಹಡಿಯಲ್ಲಿನ ಕಾಮಗಾರಿಗಳು ಬಾಕಿ ಇರುವುದು ಗಮನಕ್ಕೆ ಬಂದಿದೆ. ಈ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಬಿಗುಗಡೆಗೊಳಿಸುವ ಸಂಬಂಧ ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.
 
ಪೂನಾದ ಭಾರತ ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ (ಎನ್ಎಫ್ಎಐ)ದ ಮಾದರಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಚಲನಚಿತ್ರ ಭಂಡಾರ ಸ್ಥಾಪಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು, ಕನ್ನಡ ಚಿತ್ರರಂಗದ ಅಪೂರ್ವ ಘಟನೆಗಳನ್ನು ಸಾಕ್ಷೀಕರಿಸುವ, ದಾಖಲಿಸುವ ಹಾಗೂ ಕನ್ನಡ ಚಿತ್ರರಂಗದ ಕುರಿತು ಅಧ್ಯಯನ ದೃಷ್ಟಿಯಿಂದ ಇದೊಂದು ಉತ್ತಮ ಪ್ರಯತ್ನ ಎಂದು ಸಚಿವರು ಶ್ಲಾಘಿಸಿದರು.
 
ಅಮೃತೋತ್ಸವ ಭವನ ಕಟ್ಟಡದ ಆವರಣದಲ್ಲಿ ಮುಂದಿನ ದಿನಗಳಲ್ಲಿ ಉದ್ದೇಶಿತ ಸಿನಿಮಾ ಕಾಂಪ್ಲೆಕ್ಸ್ ನಿರ್ಮಾಣ ಮಾಡೋಣವೆಂದು ಅಕಾಡೆಮಿ ಅಧ್ಯಕ್ಷರಿಗೆ ಸಚಿವರು ಭರವಸೆ ನೀಡಿದರು. 
 
2017-18ನೇ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸುವುದು, 2019-20ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ರಚಿಸುವುದು, ಅಮೃತೋತ್ಸವ ಭವನ ಕಟ್ಟಡದ ನಿರ್ವಹಣೆಗೆ ವಾರ್ಷಿಕ ಅನುದಾನ ಒದಗಿಸುವುದು, ಪ್ರಾದೇಶಿಕ ಭಾಷಾ ಚಿತ್ರೋತ್ಸವಕ್ಕೆ ಬಂಜಾರ ಭಾಷೆ ಚಿತ್ರೋತ್ಸವ ಸೇರ್ಪಡೆ, ಕೋವಿಡ್-19 ಕಾರಣದಿಂದಾಗಿ ಮುಂದೂಡಲಾಗಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸುವುದೂ ಸೇರಿದಂತೆ ವಿವಿಧ ಪ್ರಸ್ತಾವನೆಯನ್ನು ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಶ್ರೀ ಸುನೀಲ್ ಪುರಾಣಿಕ್ ಅವರು ವಾರ್ತಾ ಸಚಿವರ ಗಮನಕ್ಕೆ ತಂದರು.
 ಮಾನ್ಯ ಸಚಿವರ ಆಪ್ತ ಕಾರ್ಯದರ್ಶಿ ವಿರೂಪಾಕ್ಷ, ಅಕಾಡೆಮಿ ರಿಜಿಸ್ಟ್ರಾರ್ ಹಿಮಂತರಾಜು ಉಪಸ್ಥಿತರಿದ್ದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ವಾರ್ತಾ ಸಚಿವರ ಭೇಟಿ - Chitratara.com
Copyright 2009 chitratara.com Reproduction is forbidden unless authorized. All rights reserved.